ಬೆಂಗಳೂರು:ನಗರದ ಪಶ್ಚಿಮ ವಲಯದ ಕೋವಿಡ್ ಉಸ್ತುವಾರಿ ಸಚಿವರಾದ, ಡಿಸಿಎಂ ಅಶ್ವತ್ಥ ನಾರಾಯಣ್ ಇಂದು ಕೋವಿಡ್ ಪರಿಸ್ಥಿತಿಯ ಬಗ್ಗೆ ಮಲ್ಲೇಶ್ವರಂನ ವಲಯ ಕಚೇರಿಯಲ್ಲಿ ಆರೋಗ್ಯಾಧಿಕಾರಿಗಳು, ಆಸ್ಪತ್ರೆ ನೋಡಲ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ಡಾ.ಅಶ್ವತ್ಥ ನಾರಾಯಣ್, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿರೋದ್ರಿಂದ ಕಡಿಮೆ ರೋಗಲಕ್ಷಣ ಇರುವ ಸೋಂಕಿತರಿಗಾಗಿ, ಗೋವಿಂದರಾಜನಗರದ ಆಯುರ್ವೇದ ಆಸ್ಪತ್ರೆಯಲ್ಲಿ ಹಾಗೂ ಗಾಂಧಿನಗರ ಆಯುರ್ವೇದ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಸದ್ಯದಲ್ಲೇ ಆರಂಭಿಸಲು ಸಿದ್ಧತೆ ನಡೆಸಲಾಗ್ತಿದೆ ಎಂದು ತಿಳಿಸಿದರು.
ಪಶ್ಚಿಮ ವಲಯದಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಪ್ರತಿ ದಿನ 10 ಸಾವಿರ ಟೆಸ್ಟಿಂಗ್ ಮಾಡಲು ಗುರಿ ನಿಗದಿ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಕನಿಷ್ಠ 20 ಜನರನ್ನು ಟ್ರೇಸಿಂಗ್ ಮಾಡಲು ತಿಳಿಸಲಾಗಿದೆ. ನಾಲ್ಕೂವರೇ ಸಾವಿರಕ್ಕೂ ಹೆಚ್ಚು ಜನ ಮನೆಯಲ್ಲಿ ಹಾಗೂ 700 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಇನ್ನು ಹೋಂ ಐಸೋಲೇಷನ್ ನಲ್ಲಿರುವವರಿಗೂ ಕಿಟ್ ಮೂಲಕ ಅಗತ್ಯ ಔಷಧ ನೀಡಲಾಗ್ತಿದೆ. ಪಲ್ಸ್ ಆಕ್ಸಿಮೀಟರ್ ವ್ಯವಸ್ಥೆಯನ್ನೂ ಪ್ರತೀ ಮನೆಗೂ ಕೊಡುವ ವ್ಯವಸ್ಥೆ ಆಗ್ತಿದೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಪಶ್ಚಿಮ ವಲಯದ ಸಹಾಯವಾಣಿ 08068248454
ಟೆಸ್ಟಿಂಗ್ ಬಗ್ಗೆ ಹಾಗೂ ಲಸಿಕೆ ವಿತರಣೆ ಬಗ್ಗೆ ಹೆಚ್ಚು ಜನರಲ್ಲಿ ಜನಜಾಗೃತಿ ಮೂಡಿಸಲಾಗುವುದು, ಹೆಲ್ಪ್ ಲೈನ್ ಬಗ್ಗೆ ಕೂಡಾ ಜನಜಾಗೃತಿ ಮೂಡಿಸಲಾಗುತ್ತದೆ. ಆಪ್ತಮಿತ್ರ ಹೆಲ್ಪ್ ಲೈನ್ ಅಲ್ಲದೆ ಪಶ್ಚಿಮ ವಲಯಕ್ಕೆ 08068248454 ಸಹಾಯವಾಣಿ ಇದ್ದು, ಜನರು ಅಗತ್ಯ ಬಿದ್ದಾಗ ಬಳಸಿಕೊಳ್ಳಬೇಕು ಎಂದರು.
ಟೆಸ್ಟಿಂಗ್ ಗೆ 84 ಮೊಬೈಲ್ ತಂಡಗಳಿದ್ದು, ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತದೆ. ಸ್ಯಾಂಪಲ್ಗಳ ವರದಿ 24 ಗಂಟೆಯೊಳಗೆ ಕೊಡಲಾಗ್ತಿದೆ. 45ರಷ್ಟು ವ್ಯಾಕ್ಸಿನೇಷನ್ ಆಗಿದೆ, ಇನ್ನೂ ವ್ಯಾಪಕವಾಗಿ ನಡೆಸಲಾಗುವುದು. ಯಾವುದೇ ರೀತಿಯಲ್ಲಿ ಬೆಡ್ ಕೊರತೆ ಇಲ್ಲ. ರಾಮಯ್ಯ ಆಸ್ಪತ್ರೆಯಲ್ಲೂ 300 ಜನ ಕೋವಿಡ್ ರೋಗಿಗಳು ಈಗಾಗ್ಲೇ ಇದ್ದಾರೆ. ಆದರೂ 200 ಬೆಡ್ ಕೊಡಲು ಸಿದ್ಧರಾಗಿದಾರೆ ಎಂದರು.
ಲಾಕ್ ಡೌನ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಡಿಸಿಎಂ, ಸಿಎಂ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲ ಎಂದಿದ್ದಾರೆ. ಜನರಿಗೆ ಗೊಂದಲ ಮಾಡುವುದಿಲ್ಲ. ಸಂಖ್ಯೆ ಜಾಸ್ತಿ ಆಗ್ತಿದೆ ಆದ್ರೆ ಆತಂಕ ಬೇಡ ಎಂದರು.
ಇನ್ನು ಸಾರಿಗೆ ನೌಕರರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಈಗಾಗಲೇ ಮಾತುಕತೆಗೆ ಕರೆದಿದಾರೆ. ಈ ಹಿಂದಿನ ಎಲ್ಲಾ ಬೇಡಿಕೆ ಈಡೇರಿಸಿದ್ದಾರೆ. ಈಗಿನ ನಿರ್ಧಾರವನ್ನೂ ಸ್ಪಷ್ಟವಾಗಿ ತಿಳಿಸಿದ್ದಾರೆ. ಪರಿಪರಿಯಾಗಿ, ವಿನಯದಿಂದ ವಿಶ್ವಾಸಕ್ಕೆ ತೆಗೆದುಕೊಂಡ್ರೂ ಸಾರಿಗೆ ನೌಕರರು ಮಣಿಯುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಸರ್ಕಾರ ಮಾಡಿ, ಕಾನೂನು ಕ್ರಮ ಕೈಗೊಳ್ಳಲು ಮುಂದಾಗ್ತಾರೆ ಎಂದರು.