ಬೆಂಗಳೂರು:ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಮನೆಯಂಗಳದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಡಿವಿಆರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಸಿಬಿ ಇನ್ಸ್ಪೆಕ್ಟರ್ಗಳಾದ ಪುನೀತ್ ಹಾಗೂ ಅಂಜುಮಾಲಾ ನೇತೃತ್ವದ ತಂಡ ಇಂದು ಬೆಳಗ್ಗೆ ಹೆಬ್ಬಾಳದಲ್ಲಿರುವ ಆದಿತ್ಯ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿದೆ.
ದಾಳಿ ವೇಳೆ ಆದಿತ್ಯ ಮನೆಯವರು ಯಾರೂ ಇರಲಿಲ್ಲ. ದಾಳಿ ವಿಚಾರ ಗೊತ್ತಾಗುತ್ತಿದ್ದಂತೆ ಮನೆಗೆ ಬಂದಿದ್ದಾರೆ. ಮ್ಯಾನೇಜರ್ ಆಗಿರುವ ರಾಮದಾಸ್ ಮೂಲಕ ಮನೆ ಸುತ್ತಮುತ್ತ ಅಳವಡಿಸಿರುವ ಸಿಸಿಟಿವಿ ಡಿವಿಆರ್ಗಳನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.
ಆದಿತ್ಯ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ಮನೆಯಲ್ಲಿ ಏನಾದರೂ ಸಾಕ್ಷ್ಯ ಲಭಿಸಬಹುದೆಂಬ ಲೆಕ್ಕಚಾರದೊಂದಿಗೆ ಸಿಸಿಬಿ ಶೋಧ ಕಾರ್ಯ ನಡೆಸುತ್ತಿದೆ. ಆದಿತ್ಯ ಬಳಸುತ್ತಿದ್ದ ಲ್ಯಾಪ್ಟಾಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಇನ್ನೊಂದೆಡೆ ಮನೆಯಂಗಳದಲ್ಲಿ ಪಾರ್ಟಿ ಮಾಡಿರುವ ಕುರುಹು ಸಿಗಬಹುದೆಂಬ ಅನುಮಾನದಲ್ಲಿ ತಲಾಶ್ ನಡೆಯುತ್ತಿದೆ.
ಸ್ಥಳೀಯರು ಹೇಳುವ ಪ್ರಕಾರ ರಾತ್ರಿ ಪೂರ್ತಿ ಪಾರ್ಟಿ ನಡೆಯುತ್ತಿದ್ದು, ಕಳೆದ ರಾತ್ರಿ ಕೂಡ ಪಾರ್ಟಿ ನಡೆದಿದೆ. ಲೈಟ್ ಆಫ್ ಮಾಡಿ ಪಾರ್ಟಿ ಮಾಡುತ್ತಾರೆ. ಲಾಕ್ಡೌನ್ ಮೊದಲು ಪಾರ್ಟಿ ನಡೆಯುತ್ತಿದ್ದು, ವಿದ್ಯುತ್ ದೀಪ ಇರುತ್ತಿತ್ತು. ಆದರೆ ಲಾಕ್ಡೌನ್ ಜಾರಿಯಾದಾಗಿನಿಂದ ಕತ್ತಲಲ್ಲಿ ಮೋಜು ಮಸ್ತಿ ನಡೆಯುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.