ಬೆಂಗಳೂರು: ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿತ ಅಬ್ದುಲ್ ಹಸನ್ ಜೊತೆ ಸಂಪರ್ಕದಲ್ಲಿದ್ದ ಮತ್ತೋರ್ವ ಶಂಕಿತ ಉಗ್ರ ಅಬ್ದುಲ್ ಅಲೀಂ ಮಂಡಲ್ ಅಲಿಯಾಸ್ ಜುಬಾ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ತಮಿಳುನಾಡಿನ ಸೇಲಂನಲ್ಲಿ ಜುಮಾನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬೆಂಗಳೂರಲ್ಲಿ ಬಂಧಿತ ಶಂಕಿತ ಉಗ್ರ ಹುಸೇನ್ ಜೊತೆ ಜುಬಾ ಲಿಂಕ್ ಹೊಂದಿದ್ದಾನೆ. 25 ಜನರ ಗ್ರೂಪ್ನಲ್ಲಿ ಈತ ಕೂಡ ಸದಸ್ಯನಾಗಿದ್ದಾನೆ. ಇಸ್ಲಾಮಿಕ್ ರಾಷ್ಟ್ರದ ಬಗ್ಗೆ ಒಲವು ಹೊಂದಿದ್ದು, ಈತನ ಮೊಬೈಲ್ಗಳನ್ನ ರಿಟ್ರೀವ್ ಮಾಡಬೇಕಿದೆ. ಗ್ರೂಪ್ನ ಇತರ ಸದಸ್ಯರು, ಇವರ ಕಾರ್ಯ ಚಟುವಟಿಕೆಗಳನ್ನ ಪತ್ತೆ ಮಾಡಬೇಕಿದೆ. ಹೀಗಾಗಿ 10 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿ ಧರ್ಮೇಂದ್ರ ಪರ ಸಿಸಿಬಿ ವಕೀಲರು ಮಾಡಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಸೇಲಂನ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಅಲೀಂ ಮಂಡಲ್ ಅನಕ್ಷರಸ್ಥನಾಗಿದ್ದಾನೆ. ವಾಟ್ಸ್ಆ್ಯಪ್ ಕಾಲ್ನಲ್ಲೇ ಬೆಂಗಳೂರಿನ ಅಬ್ದುಲ್ ಹುಸೇನ್ ಜೊತೆ ಸಂಪರ್ಕದಲ್ಲಿ ಇರುತ್ತಿದ್ದ. ಸದ್ಯ ಮಂಡಲ್ ನನ್ನ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ 10 ದಿನ ಕಸ್ಟಡಿಗೆ ಪಡೆದಿದೆ.
ಕೆಲಸ ಅರಸಿ ಬಂದ: ಅಸ್ಸೋಂನ ತೆಲಿತಿಕಾರ್ ಗ್ರಾಮದ ನಿವಾಸಿಯಾಗಿರುವ ಅಬ್ದುಲ್ ಹಸನ್ ಕೆಲಸ ಅರಸಿ ನಗರಕ್ಕೆ ಬಂದಿದ್ದ. ಧರ್ಮಾಂಧತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ. ಸಹಜವಾಗಿಯೇ ಸ್ಲೀಪರ್ ಸೆಲ್ಗಳ ಮುಖಾಂತರ ಆಲ್ ಖೈದಾ ಸಂಘಟನೆ ಸಂಪರ್ಕಕ್ಕೆ ಬಂದಿದ್ದ. ಇದು ಅಬ್ದುಲ್ಗೆ ಮತ್ತಷ್ಟು ಧರ್ಮಯುದ್ಧಕ್ಕೆ ಮುಂದಾಗಲು ಕಾರಣವಾಗಿತ್ತು.
ಇದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ 370 ಕಾಯ್ದೆ ರದ್ದುಪಡಿಸಿದ್ದು, ಕೂಡ ಅಬ್ದುಲ್ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಭಾರತದಲ್ಲಿರುವ ಮುಸ್ಲಿಮರಿಗೆ ಅನ್ಯಾಯವಾಗ್ತಿದೆ ಎಂದು ಹಲವು ಪೋಸ್ಟ್ಗಳನ್ನ ಹಾಕಿದ್ದ. ಅಷ್ಟೇ ಅಲ್ಲದೆ ಭಾರತದ ಸೈನಿಕರ ವಿರುದ್ಧವಾಗಿ ಹೋರಾಟ ಮಾಡಬೇಕು ಎಂದು ಯುವಕರನ್ನ ಪ್ರಚೋದನೆ ಮಾಡ್ತಿದ್ದ. ಇನ್ನು ದಿ ಈಗಲ್ ಆಫ್ ಖೊರಾಸಾನ್ ಆಫ್ ಹಿಂಡರ್ ಈಗಲ್ ಎಂಬ ಗ್ರೂಪನ್ನ ಟೆಲಿಗ್ರಾಮ್ನಲ್ಲಿ ರಚನೆ ಮಾಡಿ ಅದರಲ್ಲಿ ಯುವಕರಿಗೆ ಪ್ರಚೋದನೆ ನೀಡಿ, ಅವರನ್ನ ಅಫ್ಘಾನಿಸ್ತಾನಕ್ಕೆ ರವಾನೆ ಮಾಡಲು ಪ್ಲ್ಯಾನ್ ಮಾಡ್ತಿದ್ದ ಎಂದು ತಿಳಿದು ಬಂದಿದೆ.