ಬೆಂಗಳೂರು:ನಗರದ ಹೊರವಲಯದಲ್ಲಿ ಮಾದಕ ವಸ್ತುಗಳ ತಯಾರಿಕಾ ಫ್ಯಾಕ್ಟರಿ ಪತ್ತೆಯಾಗಿದೆ. ಕೋಟಿ ಕೋಟಿ ಬೆಲೆಯ ಡ್ರಗ್ಸ್ ಅಡುಗೆ ಮಾಡಲು ಬಳಸುವ ಕುಕ್ಕರ್ನಲ್ಲೇ ತಯಾರಾಗುತ್ತಿತ್ತು ಎನ್ನುವ ಮಾಹಿತಿ ಹೊರಬಿದ್ದಿದೆ.
ಸಿಂಥೆಟಿಕ್ ಡ್ರಗ್ಸ್ ಎಂದರೆ ನಮಗೆ ವಿದೇಶಗಳಲ್ಲಿನ ಮಾದಕ ಜಾಲ ನೆನಪಾಗುತ್ತದೆ. ಅಲ್ಲಿ ತಯಾರಿಸುವ ಸಿಂಥೆಟಿಕ್ ಡ್ರಗ್ಗೆ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ವಿದೇಶದಿಂದ ಡಾರ್ಕ್ ವೆಬ್ ಮೂಲಕ ಡ್ರಗ್ ಮಾರಾಟ ಮಾಡಲಾಗುತ್ತದೆ. ಆದರೆ, ನಗರದಲ್ಲೇ ಮಿನಿ ಡ್ರಗ್ ಫ್ಯಾಕ್ಟರಿ ಓಪನ್ ಮಾಡಿ ಕೋಟಿ ಕೋಟಿ ಬೆಲೆಯ ಡ್ರಗ್ ತಯಾರು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಿಸಿಬಿ ಆ್ಯಂಟಿ ನಾರ್ಕೋಟಿಕ್ ವಿಂಗ್ನ ಅಧಿಕಾರಿ ವಿರೂಪಾಕ್ಷ ಮತ್ತು ಸಿಬ್ಬಂದಿ ಡ್ರಗ್ ಫ್ಯಾಕ್ಟರಿಯನ್ನು ಜಪ್ತಿ ಮಾಡಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.
ಹೊಗೆಯಿಂದ ಎಂಡಿಎಂಎ ಕ್ರಿಸ್ಟಲ್:
ನಗರದ ಸೋಲದೇವನಹಳ್ಳಿಯಲ್ಲಿ ಇಬ್ಬರು ಆಫ್ರಿಕನ್ ಪ್ರಜೆಗಳು ಈ ಡ್ರಗ್ ಫ್ಯಾಕ್ಟರಿ ನಡೆಸುತ್ತಿದ್ದರು. ಮನೆಯಲ್ಲೇ ರಾಸಾಯನಿಕ ಬಳಸಿ ಬೆಲೆಬಾಳುವ ಎಂಡಿಎಂಎ ಕ್ರಿಸ್ಟಲ್ ತಯಾರಿಸುತ್ತಿದ್ದರು. ವಿದೇಶದಿಂದ ಕಚ್ಚಾವಸ್ತುಗಳನ್ನು ಕೊರಿಯರ್ ಮೂಲಕ ತರಿಸಿ ರಾಸಾಯನಿಕಗಳನ್ನು ಕುಕ್ಕರ್ನಲ್ಲಿ ಕುದಿಸಿ ಡ್ರಗ್ ತಯಾರು ಮಾಡುತ್ತಿದ್ದರು. ಪ್ರೆಶರ್ ಕುಕ್ಕರ್ನಲ್ಲಿ ರಾಸಾಯನಿಕ ಬಳಸಿ ಅದನ್ನು ಕುದಿಸಿ ಅದರಿಂದ ಬರುವ ಹೊಗೆಯಿಂದ ಎಂಡಿಎಂಎ ಕ್ರಿಸ್ಟಲ್ ಉತ್ಪಾದಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಹಿತಿ ನೀಡಿದ ಸಿಸಿಬಿ ಜಂಟಿ ಆಯುಕ್ತ ರಮಣ್ ಗುಪ್ತಾ, ರಿಚರ್ಡ್ ಎನ್ನುವ ವಿದೇಶಿ ಪ್ರಜೆಯನ್ನು ಬಂಧಿಸಿದ್ದೇವೆ. ಈತನ ಅಣ್ಣ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರೆದಿದೆ ಎಂದಿದ್ದಾರೆ.