ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಯೂರಲು ಬಂದಿದ್ದ ಐದು ಮಂದಿ ಬಾಂಗ್ಲಾದೇಶದ ವಲಸಿಗರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಅಕ್ರಮ ವಲಸಿಗರ ಬಗ್ಗೆ ವಿಶೇಷ ಕ್ರಮ ವಹಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ರಮ ವಲಸಿಗರ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಿದ್ದು, ಅಂತವರ ಪಟ್ಟಿ ಮಾಡಿ, ಅವರನ್ನು ಡಿಟೆನ್ಷನ್ ಸೆಂಟರ್ಗೆ ಕರೆತರಲು ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲಾಗಿದೆ. ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯಕಾರಿ. ಅವರು ಹೇಗೆ ಬಂದಿದ್ದಾರೆ? ಯಾರು ಕರೆದುಕೊಂಡು ಬಂದಿದ್ದಾರೆ? ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ.
ಅಕ್ರಮ ವಲಸಿಗರಿಗೆ ದಾಖಲೆ ಕೊಡಿಸುವ ಜಾಲವೇ ಇದೆ. ಕರ್ನಾಟಕದಲ್ಲಿ ಅಲ್ಲ, ಅಸ್ಸೋಂ ಭಾಗದಲ್ಲಿ ಇದೆ. ಕೇಂದ್ರಕ್ಕೆ ಹಾಗೂ ಆಯಾ ರಾಜ್ಯಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಈ ಬಗ್ಗೆ ವಿಶೇಷವಾದ ತನಿಖೆಯನ್ನು ನಡೆಸಲಾಗುತ್ತಿದೆ. ಕಾಫಿ ಎಸ್ಟೇಟ್ಗಳಿಗೆ ಹಾಗೂ ಕಟ್ಟಡ ಕಾರ್ಮಿಕರಾಗಿ ವಲಸಿಗರು ಬಂದು ಸೇರಿಕೊಂಡವರೂ ಇದ್ದಾರೆ. ಈ ರೀತಿ ಅಕ್ರಮವಾಗಿ ಎಷ್ಟು ಮಂದಿ ಬಾಂಗ್ಲಾ ಜನರನ್ನು ಕರೆ ತರಲಾಗಿದೆ ಎಂಬುದನ್ನೂ ಬಂಧಿತರಿಂದ ಬಾಯಿ ಬಿಡಿಸುತ್ತೇವೆ. ವಲಸಿಗರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮಾಡಿಕೊಂಡಿದ್ದಾರೆ.