ಬೆಂಗಳೂರು :ಕಡಿಮೆ ಬಡ್ಡಿ ದರದಲ್ಲಿ ತ್ವರಿತಗತಿಯಲ್ಲಿ ಸಾಲ ನೀಡುವುದಾಗಿ ನಂಬಿಸಿ ಆನ್ಲೈನ್ ಆ್ಯಪ್ಗಳ ಮುಖಾಂತರ ಸಾಲ ನೀಡಿ ನಂತರ ಗ್ರಾಹಕರಿಂದ ಮನಬಂದಂತೆ ಲಕ್ಷಾಂತರ ರೂಪಾಯಿ ಬಡ್ಡಿ ವಸೂಲಿ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ.
ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ಸೋಷಿಯಲ್ ಮೀಡಿಯಾ ಮುಖಾಂತರ ಹೇಳಿಕೊಂಡು ನೂರಾರು ಜನರಿಗೆ ಸಾಲ ಕೊಟ್ಟು ನಂತರ ಅವರಿಂದ ಬಡ್ಡಿ, ಸಾಲ ವಸೂಲಿ ಮಾಡಿಸಿಕೊಂಡರೂ ಕೂಡ ಮಾನಸಿಕ ಹಿಂಸೆ ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಾರತ್ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿರುವ ಲೈಕೋ ರೈಸ್ ಟೆಕ್ನಾಲಜಿ ಹೆಸರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾಮರಾಜ್ ಹಾಗೂ ದರ್ಶನ್ ಎಂಬುವರನ್ನು ಬಂಧಿಸಿ ಕಚೇರಿಯಲ್ಲಿದ್ದ 84 ಕಂಪ್ಯೂಟರ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಚೀನಾ ಮೂಲದ ಕಿಂಗ್‌ಪಿನ್ ನಾಪತ್ತೆಯಾಗಿದ್ದಾನೆ.
ವಾರದ ರೂಪದಲ್ಲಿ ಸಾಲ ನೀಡುತ್ತಿದ್ದ ಆ್ಯಪ್ :ಮಾರತ್ ಹಳ್ಳಿಯಲ್ಲಿರುವ ಲೈಕೋ ರೈಸ್ ಟೆಕ್ನಾಲಜಿ ಕಂಪನಿಯ ಕ್ರೇಜಿ ರೂಫಿ, ಕ್ಯಾಶ್ ಮಾಸ್ಟರ್ ಆ್ಯಪ್ಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಸಾಲ ನೀಡುವುದಾಗಿ ಭರವಸೆ ನೀಡುತ್ತಿದ್ದರು.
ಪ್ರಕರಣದ ಪ್ರಮುಖ ಆರೋಪಿಗಳಾದ ಚೀನಾ ಮೂಲದ ವ್ಯಕ್ತಿಗಳು ಕಚೇರಿಯಲ್ಲಿ ಕೆಲಸ ಮಾಡುವ ಅಮಾಯಕರ ಹೆಸರಿನ ದಾಖಲಾತಿ ಪಡೆದು 52 ನಕಲಿ ಕಂಪನಿಗಳನ್ನು ತೆರೆದು ಅವರ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆದಿದ್ದರು.
ಅಧಿಕ ಬಡ್ಡಿ ಹಣವನ್ನು ವರ್ಗಾಯಿಸಿಕೊಂಡು ಬಳಿಕ ಆನ್ಲೈನ್ ಮುಖಾಂತರ ನಮ್ಮ(ಭಾರತ) ದೇಶದ ಖಾತೆಗಳಿಂದ ತಮ್ಮ(ಚೀನಾ) ದೇಶದ ಬ್ಯಾಂಕ್ ಅಕೌಂಟ್ಗೆ ಹಣ ವರ್ಗಾಯಿಸಿ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು ಎಂದು ಗ್ರಾಹಕರಿಗೆ ನಂಬಿಸಿ ಕೋಟ್ಯಂತರ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಉತ್ತರ ಭಾರತ ಜನರೇ ಇವರ ಟಾರ್ಗೆಟ್ ಆಗಿದ್ದರು.
ಇದನ್ನೂ ಓದಿ:ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನ ತೋಪಿಗೆ ಕರೆದೊಯ್ದು ರೇಪ್ ಮಾಡಿದ ಕಾಮುಕರು
ವಂಚನೆ ಜಾಲದಲ್ಲಿ ಚೀನಾ ದೇಶದ ವ್ಯಕ್ತಿಗಳು ಬೆಂಗಳೂರಿನಲ್ಲಿ ಅಮಾಯಕ ಜನರಿಂದ ದಾಖಲಾತಿ ಪಡೆದು ಅವರ ಹೆಸರಿನಲ್ಲಿ ನಕಲಿ ಕಂಪನಿಗಳನ್ನು ನೋಂದಣಿ ಮಾಡಿಸಿ ನಂತರ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮವಾಗಿ ಹಣವನ್ನು ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.