ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ ಮನೆ ಮೇಲೆ ಸಿಬಿಐ ದಾಳಿ - ಐಎಂಎ ವಂಚನೆ ಪ್ರಕರಣ
07:52 November 23
ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ಗೆ ಸಿಬಿಐ ಮತ್ತೊಂದು ಶಾಕ್ ನೀಡಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೇಗ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ರೋಷನ್ ಬೇಗ್ಗೆ ಮತ್ತೆ ಸಿಬಿಐ ಶಾಕ್ ನೀಡಿದೆ. ಬೇಗ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಪುಲಿಕೇಶಿನಗರ ಕೋಲ್ಸ್ ಪಾರ್ಕ್ ಬಳಿ ಇರುವ ರೋಷನ್ ಬೇಗ್ ನಿವಾಸದ ಮೇಲೆ 7 ಜನ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಬೇಗ್ ಪತ್ನಿಗೆ ದಾಳಿ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿ ಮೂಲದ ಸಿಬಿಐ ಅಧಿಕಾರಿಗಳ ತಂಡ ದಾಖಲೆಗಳ ಶೋಧ ಕಾರ್ಯದಲ್ಲಿ ನಿರತವಾಗಿದೆ.
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬೇಗ್, ಅಡ್ಮಿನಿಸ್ಟ್ರೇಷನ್ ಬ್ಯಾರಕ್ ಕ್ವಾರಂಟೈನ್ ಕೇಂದ್ರದಲ್ಲಿ ಮುಂದಿನ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಕಳೆಯಲಿದ್ದಾರೆ. ಐಎಂಎ ಪ್ರಕರಣದಲ್ಲಿ ಆರೋಪಿ ಮನ್ಸೂರ್ನಿಂದ 400 ಕೋಟಿ ರೂ. ಪಡೆದಿರುವ ಆರೋಪ ರೋಷನ್ ಬೇಗ್ ಮೇಲಿದೆ. ಈ ಹಿಂದೆ ಐಎಂಎ ಮುಖ್ಯಸ್ಥ ಮನ್ಸೂರ್ ಕೂಡ ವಿಡಿಯೋ ಮೂಲಕ ರೋಷನ್ ಬೇಗ್ ಹೆಸರನ್ನು ಹೊರಹಾಕಿದ್ದರು.