ಬೆಂಗಳೂರು: ದಿನಬಳಕೆ ವಸ್ತುಗಳ ದರ ಏರಿಕೆ ಜನಸಾಮಾನ್ಯರಿಗೆ ಶಾಕ್ ಕೊಟ್ಟಿದೆ. ಕರೆಂಟ್ ದರವೂ ಹೆಚ್ಚಾಗಿ ಜನರ ಮೇಲೆ ಹೊರೆಯಾಗಿದೆ. ಇದೀಗ ದುಬಾರಿ ದುನಿಯಾದಲ್ಲಿ ಮತ್ತೊಂದು ದರ ಏರಿಕೆ ಶಾಕ್ಗೆ ರೆಡಿಯಾಗಬೇಕಿದೆ. ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಕಾರಣ, ಬೆಂಗಳೂರು ಜಲಮಂಡಳಿಯು ನೀರಿನ ದರ ಪರಿಷ್ಕರಣೆಗೆ ಮತ್ತೆ ಪ್ರಸ್ತಾವನೆ ಸಲ್ಲಿಸಿದೆ. 8 ವರ್ಷದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆಗೆ ಸರ್ಕಾರ ಅಸ್ತು ಅನ್ನುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಗೃಹ ಬಳಕೆಯ ನೀರಿಗೆ ಶೇ.16ರಷ್ಟು ಹಾಗೂ ವಾಣಿಜ್ಯ ಬಳಕೆಗೆ ಶೇ.21ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಹೋಗಿದೆ. ಕರೆಂಟ್ ಬಿಲ್ ಹೆಚ್ಚಳ ಬೆನ್ನಲ್ಲೇ ನೀರಿನ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ಜಲಮಂಡಳಿ ನಿರ್ವಹಣೆ ವೆಚ್ಚ ಅಧಿಕವಾದ ಕಾರಣದಿಂದ ಆದ ನಷ್ಟವನ್ನು ಸರಿದೂಗಿಸಲು ನೀರಿನ ದರ ಪ್ರಸ್ತಾವನೆ ಮಾಡಲಾಗಿದೆ.