ಕರ್ನಾಟಕ

karnataka

ETV Bharat / city

ಎಚ್‌ಐವಿ ಸೋಂಕು ಮುಚ್ಚಿಟ್ಟು ಪತ್ನಿಗೆ ಮೋಸ.. ವರದಕ್ಷಿಣೆ ಕಿರುಕುಳ ನೀಡ್ತಿದ್ದ ವ್ಯಕ್ತಿಯ ವಿರುದ್ಧ ಕೇಸ್​.. - ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಎಂಜಿನಿಯರ್​ ವಿರುದ್ಧ ಕೇಸ್​

ಆರ್‌ಟಿನಗರದ ನಿವಾಸಿಯಾದ 29 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಬಸವನಗುಡಿ ನಿವಾಸಿ 35 ವರ್ಷದ ಇಂಜಿನಿಯರ್ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ..

dowry-harasser
ವರದಕ್ಷಿಣೆ ಕಿರುಕುಳ

By

Published : Jan 14, 2022, 4:56 PM IST

ಬೆಂಗಳೂರು :ಮೊದಲೇ ಆ ವ್ಯಕ್ತಿ ಹೆಚ್​ಐವಿ ಸೋಂಕಿತ. ಈ ವಿಷಯವನ್ನು ವಿವಾಹದ ವೇಳೆ ಮುಚ್ಚಿಟ್ಟು ಪತ್ನಿಗೆ ಮೋಸ ಮಾಡಿ ಪತ್ನಿಗೂ ಸೋಂಕು ತಗುಲಿಸಿದ್ದ. ಬಳಿಕ ವರದಕ್ಷಿಣೆಗಾಗಿ ಪ್ರತಿದಿನವೂ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಇದೀಗ ಮಹಿಳೆಯನ್ನು ಮನೆಯಿಂದಲೇ ಆಚೆ ಹಾಕಿ ವಿಕೃತಿ ಮೆರೆದಿದ್ದಾನೆ.

ಇದರಿಂದ ನೊಂದ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಲ್ಲದೇ, ತನಗೆ ನ್ಯಾಯ ಕೊಡಿಸಬೇಕು ಎಂದು ಪೊಲೀಸ್​ ಠಾಣೆಗೂ ದೂರು ನೀಡಿದ ಸಂಗತಿ ಬೆಳಕಿಗೆ ಬಂದಿದೆ.

ಆರ್‌ಟಿನಗರದ ನಿವಾಸಿಯಾದ 29 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ, ಬಸವನಗುಡಿ ನಿವಾಸಿ 35 ವರ್ಷದ ಇಂಜಿನಿಯರ್ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ಎಫ್​ಐಅರ್ ದಾಖಲಾಗಿದೆ.

ಘಟನೆ ಏನು? :ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಆರೋಪಿಯು 2018ರ ಮಾರ್ಚ್ 12ರಂದು ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದ. ಹನಿಮೂನ್‌ಗಾಗಿ ಶಿಮ್ಲಾ, ಮನಾಲಿಗೆ ಹೋದರೂ ಆರೋಪಿಯು ಹೊಟ್ಟೆ ನೋವಾಗುತ್ತಿದೆ ಎಂದು ಹೇಳಿ ಪತ್ನಿಯೊಂದಿಗೆ ಅಂತರ ಕಾಯ್ದುಕೊಂಡಿದ್ದ.

ಈ ನಡುವೆ ಆರೋಪಿ ವರದಕ್ಷಿಣೆ ತರುವಂತೆ ಪತ್ನಿಗೆ ಮಾನಸಿಕ ಹಿಂಸೆ ಕೊಡಲು ಆರಂಭಿಸಿದ್ದ. ನಿನ್ನನ್ನು ವಿವಾಹವಾಗುವ ಬದಲು ಇಂಜಿನಿಯರ್ ಓದಿದ ಯುವತಿಯನ್ನು ವಿವಾಹವಾಗಿದ್ದರೆ ಹೆಚ್ಚಿನ ವರದಕ್ಷಿಣೆ ಸಿಗುತ್ತಿತ್ತು. ಜೊತೆಗೆ ಆಕೆಗೆ ಸಂಪಾದನೆಯೂ ಹೆಚ್ಚಾಗಿರುತ್ತಿತ್ತು ಎಂದು ಹೀಯಾಳಿಸುತ್ತಿದ್ದ ಎಂದು ಪತ್ನಿ ದೂರಿದ್ದಾಳೆ.

ಪತ್ನಿ ತಂದೆಯಿಂದಲೂ ಲಕ್ಷಾಂತರ ರೂ.ಪೀಕಿದ್ದ

ಇದಲ್ಲದೇ ಪತ್ನಿಯನ್ನು ಎಸ್‌ಎಪಿ ಕೋರ್ಸ್ ಮಾಡುವಂತೆ ಒತ್ತಾಯವಾಗಿ ಸೇರಿಸಿ ಮಹಿಳೆಯ ತಂದೆಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ. ಈ ನಡುವೆಯೂ ಆರೋಪಿಯು ಕೆಲಸದ ನೆಪ ಹೇಳಿ ಪತ್ನಿಯಿಂದ ದೂರ ಇರುತ್ತಿದ್ದ.

ಕೆಲಸದ ನಿಮಿತ್ತ ಆರೋಪಿ ಮೈಸೂರಿಗೆ ಹೋದ ಸಂದರ್ಭದಲ್ಲಿ ದೂರುದಾರ ಮಹಿಳೆ ರೂಂನಲ್ಲಿ ಬಚ್ಚಿಟ್ಟಿದ್ದ ಮೆಡಿಕಲ್ ದಾಖಲೆಗಳನ್ನು ಪರಿಶೀಲಿಸಿದ್ದಾಳೆ.

ಈ ವೇಳೆ ಆರೋಪಿ ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವುದನ್ನು ದೃಢೀಕರಿಸಿದ ವರದಿಯೊಂದು ಪತ್ತೆಯಾಗಿತ್ತು. ಅನುಮಾನ ಬಂದು ಮಹಿಳೆ ತಾನೂ ಎಚ್‌ಐವಿ ಪರೀಕ್ಷೆಗೆ ಒಳಗಾದಾಗ ತನಗೂ ಎಚ್‌ಐವಿ ಸೋಂಕು ಇರುವುದು ದೃಢಪಟ್ಟಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಚ್‌ಐವಿ ಸೋಂಕು ಮುಚ್ಚಿಟ್ಟು ವಿವಾಹ

ಪತಿ ವಿವಾಹವಾಗುವ ಮೊದಲು ತನಗೆ ಎಚ್​ಐವಿ ಸೋಂಕು ಇರುವ ವಿಚಾರವನ್ನು ಹೇಳಿರಲಿಲ್ಲ. ಪತಿಯ ಸಂಪರ್ಕ ಹೊಂದಿ ನನಗೂ ಈಗ ಎಚ್‌ಐವಿ ಸೋಂಕು ತಗುಲಿದೆ. ಇಷ್ಟಾದರೂ ಈ ಸಂಗತಿಯನ್ನು ಪಾಲಕರಿಗೆ ತಿಳಿಸದೇ ಪತಿಯೊಂದಿಗೆ ಹೊಂದಿಕೊಂಡು ಹೋಗಿದ್ದೆ. ಆದರೆ, ಪತಿ ವರದಕ್ಷಿಣೆ ಮತ್ತು ಶೀಲ ಶಂಕಿಸಿ ಕಿರುಕುಳ ನೀಡಿದ್ದರಿಂದ ನೊಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದೆ.

ಬಳಿಕ ಅಧಿಕಾರಿಗಳು ಪತಿಯನ್ನು ಕರೆಸಿ ರಾಜೀಸಂಧಾನ ಮಾಡಿ ಕಳುಹಿಸಿದ್ದರು. ಇದಾದ ಬಳಿಕ ಪತಿ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರೆಸಿ ಶೀಲ ಶಂಕಿಸಿ ಮನೆಯಿಂದ ಇದೀಗ ಹೊರ ಹಾಕಿದ್ದಾನೆ. ಪತಿಯ ಮನೆಯಲ್ಲಿ ನನಗೆ ಸಂಬಂಧಿಸಿದ ಚಿನ್ನದೊಡವೆ ಸೇರಿದಂತೆ ಯಾವುದೇ ವಸ್ತುಗಳನ್ನು ನೀಡಿಲ್ಲ ಎಂದು ಮಹಿಳೆ ದೂರು ನೀಡಿದ್ದಾರೆ.

ABOUT THE AUTHOR

...view details