ಬೆಂಗಳೂರು:ಹೃದಯ ಸ್ತಂಭನದಿಂದ ಸಾವಿನ ಪ್ರಕರಣಗಳು ಅಧಿಕವಾಗುತ್ತಿವೆ. ಹೀಗಾಗಿ, ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಜಯದೇವ ಆಸ್ಪತ್ರೆಯಲ್ಲಿ ಎಲೆಕ್ಟ್ರೋ ಫಿಸಿಯಾಲಜಿ (ಇಪಿ) ಎಂಬ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಹೃದಯ ಶಸ್ತ್ರಚಿಕಿತ್ಸೆ ಕಾರ್ಯಾಗಾರ ನಡೆಸಲು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಜ್ಜಾಗಿದೆ. ಇಲ್ಲಿ ಹೃದಯ ಸ್ತಂಭನ ಬಾರದಂತೆ ಎಚ್ಚರ ವಹಿಸಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲೆಕ್ಟ್ರೋ ಫಿಸಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಜಯಪ್ರಕಾಶ್ ಶೆಂತರ್, 'ಆಗಸ್ಟ್ 30 ಮತ್ತು 31ರಂದು ಎಲೆಕ್ಟ್ರೋ ಫಿಸಿಯಾಲಜಿ ತಂತ್ರಜ್ಞಾನದ ಮೂಲಕ ಹೃದಯ ಶಸ್ತ್ರಚಿಕಿತ್ಸೆ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರದಲ್ಲಿ ಇಪಿ ಲೈವ್ ಕೂಡ ಇರಲಿದೆ. ಅಲ್ಲದೆ, ಈ ಕಾರ್ಯಾಗಾರದಲ್ಲಿ 14 ಪ್ರಕರಣಗಳಲ್ಲಿ ಈಗಾಗಲೇ ಶಸ್ತ್ರಚಿಕಿತ್ಸೆ ನಡೆಸಿ ಚಿತ್ರೀಕರಣ ಮಾಡಿಕೊಂಡಿರುವ ಪ್ರಕರಣಗಳ ಬಗ್ಗೆಯೂ ವಿಮರ್ಶಿಸಲಾಗುವುದು ಎಂದು ಹೇಳಿದರು.
ಎಲೆಕ್ಟ್ರೋ ಫಿಸಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಜಯಪ್ರಕಾಶ್ ಶೆಂತರ್ ಇಲ್ಲಿ 16 ಮಂದಿ ಬಡ ಹೃದ್ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಿದ್ದೇವೆ. ಇದಕ್ಕೆ ಒಂದು ಕೋಟಿ ರೂಪಾಯಿ ವೆಚ್ಚ ಆಗಲಿದೆ. ಆದರೆ, ಇಲ್ಲಿ ಸಂಪೂರ್ಣ ಉಚಿತ. ಲೈವ್ ಸಮಾವೇಶದಲ್ಲಿ ಹೃದಯ ಬಡಿತವನ್ನೇ ಪ್ರಮುಖವಾಗಿ ಕೇಂದ್ರೀಕರಿಸಲಾಗಿದೆ. ಭಾರತದಲ್ಲಿ 1.3 ಕೋಟಿ ಜನರಿಗೆ ಇಂತಹ ಚಿಕಿತ್ಸೆ ಅಗತ್ಯವಾಗಿದೆ. ಶಸ್ತ್ರ ಚಿಕಿತ್ಸೆಯನ್ನು ಜಗತ್ತಿನಾದ್ಯಂತ ಎಲ್ಲಾ ಹೃದ್ರೋಗ ತಜ್ಞರು ನೇರವಾಗಿ ವೀಕ್ಷಿಸಿ ತಮ್ಮ ವಿಚಾರ ವಿನಿಯಮ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರ ನೇತೃತ್ವದಲ್ಲಿ ಭಾರತ, ಅಮೆರಿಕ, ಶ್ರೀಲಂಕಾ ರಾಷ್ಟ್ರಗಳ 8 ತಜ್ಞರುಳ್ಳ ತಂಡ ಈ ಸಂದರ್ಭದಲ್ಲಿ 16 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಹೃದ್ರೋಗ ತಜ್ಞರು, ವೈದ್ಯಕೀಯ ವಿದ್ಯಾರ್ಥಿಗಳು ಆಧುನಿಕ ಹೃದಯ ಶಸ್ತ್ರಚಿಕಿತ್ಸೆ ವಿಧಾನ ಮತ್ತು ಸೂಕ್ತ ಮಾರ್ಗದ ಬಗ್ಗೆ ತಿಳಿದುಕೊಳ್ಳಲು ಈ ಸಮಾವೇಶ ಸಹಕಾರಿಯಾಗಲಿದೆ.