ಬೆಂಗಳೂರು:ರಾಜ್ಯದಲ್ಲಿ ಉಪ ಚುನಾವಣೆ ಅಖಾಡ ರಂಗೇರಿದೆ. ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಗೆಲುವಿನ ಹೂಮಾಲೆಗಾಗಿ ಅಭ್ಯರ್ಥಿಗಳು ರಣತಂತ್ರ ಹೆಣೆಯೋದರಲ್ಲಿ ಬ್ಯುಸಿಯಾಗಿದ್ದಾರೆ. ಉಪಚುನಾವಣೆಯಲ್ಲಿ ಅಂತಿಮವಾಗಿ 26 ಅಭ್ಯರ್ಥಿಗಳು ಅಖಾಡಕ್ಕೆ ಈ ಕ್ಷೇತ್ರದಿಂದ ಇಳಿದಿದ್ದು, ಐದು ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.
ನಿನ್ನೆ ನಾಮಪತ್ರ ಪರಿಶೀಲನಾ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್, ಬಿಜೆಪಿ ಅಭ್ಯರ್ಥಿ ಶರವಣ, ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್, ಕನ್ನಡ ಚಳುವಳಿ ಪಕ್ಷದಿಂದ ವಾಟಾಳ್ ನಾಗರಾಜ್ ಹಾಗೂ ಕೆಲವು ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ನಾಮಪತ್ರ ಪರಿಶೀಲನೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು.
ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಕನ್ನಡ ಚಳುವಳಿ ಪಕ್ಷದ ಅಭ್ಯರ್ಥಿಗಳ ಆಸ್ತಿ ವಿವರವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಬಹಿರಂಗ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಶರವಣ ಅವರೇ ಕೋಟಿ ಕುಳ ಎನಿಸಿದ್ದಾರೆ. ವಿಶೇಷ ಅಂದ್ರೆ, ಶರವಣ ಅವರ ಆಸ್ತಿಗಿಂತ ಅವರ ಪತ್ನಿಯ ಆಸ್ತಿ ಹೆಚ್ಚಾಗಿದ್ದು, ಶರವಣ ತನ್ನ ಬಳಿ ನಗದು ಇಲ್ಲ ಎಂದು ಆಫಿಡವಿಟ್ನಲ್ಲಿ ನಮೂದಿಸಿದ್ದಾರೆ.
ನಿನ್ನೆ ಯಾವುದೇ ಪಕ್ಷದ ಅಭ್ಯರ್ಥಿಗಳು ಶಿವಾಜಿನಗರ ಕ್ಷೇತ್ರದಲ್ಲಿ ಪ್ರಚಾರವನ್ನು ಕೈಗೊಳ್ಳಲಿಲ್ಲ. ಬದಲಾಗಿ ಅವರ ಕಚೇರಿಯಲ್ಲಿ ಕುಳಿತು ಚುನಾವಣೆಯನ್ನು ಗೆಲ್ಲುವುದಕ್ಕೆ ಯಾವ ಸ್ಟ್ರಾಟಜಿ ಬಳಸಬಹುದು? ಹೇಗೆ ಮತದಾರರನ್ನು ಸೆಳೆಯಬಹುದು? ಎಂಬ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ರು.