ಬೆಂಗಳೂರು:ರಾಜ್ಯಾದ್ಯಂತ ಇಂದಿನಿಂದ 1- 10ನೇ ತರಗತಿಗಳು ಆರಂಭಗೊಂಡಿದೆ. ಬಹುತೇಕ ಎಲ್ಲ ಭಾಗದಲ್ಲೂ ಮಕ್ಕಳ ದಾಖಲಾತಿ ಅತ್ಯುತ್ತಮವಾಗಿದೆ. ಮರಳಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಆದರೆ, ಮಕ್ಕಳ ಕಲಿಕೆಗೆ ಬೇಕಿರುವ ಪಠ್ಯಪುಸ್ತಕವೇ ಕೈ ಸೇರಿಲ್ಲ. ಈ ಸಂಬಂಧ ಖಾಸಗಿ ಶಾಲೆಗಳ ಒಕ್ಕೂಟವೂ ಬೇಸರ ವ್ಯಕ್ತಪಡಿಸಿದೆ. ಪ್ರಸ್ತುತ ವರ್ಷದಲ್ಲಿ ಪರಿಷ್ಕೃತ ಪಠ್ಯಪುಸ್ತಕವು ಶಾಲೆಗಳಿಗೆ ಸರಬರಾಜು ಆಗಿಲ್ಲ. ಇದಕ್ಕೆ ಕಾರಣ ಪುಸ್ತಕ ಮುದ್ರಣ ಕಾರ್ಯ ಇನ್ನೂ ನಡೆಯುತ್ತಿದೆ ಎನ್ನುವುದು.
ರಷ್ಯಾ- ಉಕ್ರೇನ್ ನಡುವಿನ ಯುದ್ಧದಿಂದಾಗಿ ಮುದ್ರಣ ಕಾಗದ ಸಮಸ್ಯೆ ಎದುರಾಗಿದ್ಯಾ? ಕಚ್ಚಾ ಕಾಗದ ಸಿಗದ ಕಾರಣಕ್ಕೆ ಶೇ.40ಕ್ಕಿಂತಲೂ ಹೆಚ್ಚು ಪರಿಷ್ಕೃತ ಪಠ್ಯ ಪುಸ್ತಕ ಮುದ್ರಣ ಬಾಕಿ ಉಳಿದಿದ್ಯಾ? ಇಂತಹದೊಂದು ಚರ್ಚೆ ನಡೆಯುತ್ತಿದೆ. ಆದರೆ, ಇದೆಲ್ಲವನ್ನೂ ತಳ್ಳಿ ಹಾಕಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್, ಸರ್ಕಾರ ಶಿಕ್ಷಣದಲ್ಲಿ ರಾಜಕೀಯ ಮಾಡಿಕೊಂಡು ಕೂರುವ ಬದಲು ಮಕ್ಕಳಿಗೆ ಅಗತ್ಯವಿರುವ ಪಠ್ಯಪುಸ್ತಕ ನೀಡುವ ಕಡೆ ಗಮನ ಕೊಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಿದ್ದಾರೆ.