ಬೆಂಗಳೂರು:ರಾಜ್ಯ ಸರ್ಕಾರ ದೊಡ್ಡ - ದೊಡ್ಡ ಯೋಜನೆಗಳನ್ನು ಘೋಷಿಸುತ್ತದೆ. ಇದಕ್ಕಾಗಿ ಬೃಹತ್ ಪ್ರಮಾಣದ ಅನುದಾನವನ್ನೂ ನೀಡಲಾಗುತ್ತದೆ. ಭಾರಿ ಪ್ರಮಾಣದಲ್ಲಿ ಖರ್ಚು ವೆಚ್ಚ ಮಾಡುವ ಮೂಲಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಆದರೆ, ವರ್ಷಗಳು ಕಳೆದರೂ ಕಾಮಗಾರಿಗಳು ಮಾತ್ರ ಪೂರ್ಣವಾಗದೇ ಬಾಕಿ ಉಳಿದುಕೊಳ್ಳುತ್ತವೆ. ಈ ಪ್ರಮುಖ ಲೋಪದೋಷವನ್ನು ಸಿಎಜಿ ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ. ನೂರಾರು ಕೋಟಿ ಖರ್ಚು ಮಾಡಲಾದ ಹಲವು ಬೃಹತ್ ಕಾಮಗಾರಿಗಳು ಪೂರ್ಣವಾಗದೇ ಹಾಗೇ ಬಾಕಿ ಉಳಿದುಕೊಂಡಿರುವುದಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ಸಿಎಜಿ ವರದಿ ಹೇಳಿದ್ದೇನು?:
ರಾಜ್ಯ ಸರ್ಕಾರದಿಂದ ಗಣನೀಯ ಪ್ರಮಾಣದಲ್ಲಿ ವೆಚ್ಚ ಮಾಡಲಾಗಿರುವ ಹೆಚ್ಚಿನ ಸಂಖ್ಯೆಯ ಕಾಮಗಾರಿಗಳು ಪೂರ್ಣವಾಗದೇ ಬಾಕಿ ಉಳಿದಿರುವ ಬಗ್ಗೆ ಸಿಎಜಿ ವರದಿಯಲ್ಲಿ ಆಕ್ಷೇಪ ಎತ್ತಿದೆ.
ಸಿಎಜಿ ವರದಿಯಲ್ಲಿ ಸುಮಾರು 2,341.53 ಕೋಟಿ ರೂ. ವೆಚ್ಚದ ವಿವಿಧ ಬೃಹತ್ ಯೋಜನೆಗಳ ಕಾಮಗಾರಿಗಳು ಹಲವು ವರ್ಷಗಳಿಂದ ಪೂರ್ಣವಾಗದೇ, ಬಾಕಿ ಉಳಿದುಕೊಂಡಿರುವುದಾಗಿ ತಿಳಿಸಲಾಗಿದೆ. ಇದರಲ್ಲಿ ರಸ್ತೆ ಕಾಮಗಾರಿಗಳ ಪಾಲೇ ಹೆಚ್ಚಿದೆ. ನಂತರದ ಸ್ಥಾನ ನೀರಾವರಿ ಸಂಬಂಧಿತ ಕಾಮಗಾರಿಗಳದ್ದಾಗಿದೆ.
2,164.53 ಕೋಟಿ ರೂ. ವೆಚ್ಚದ ಸುಮಾರು 1,778 ಕಾಮಗಾರಿಗಳಿಗೆ 2015ರಿಂದ 2019ರ ಅವಧಿಯಲ್ಲಿ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇತ್ತ 2010-2015ರ ಅವಧಿಯಲ್ಲಿ 177 ಕೋಟಿ ರೂ. ವೆಚ್ಚದ 38 ಕಾಮಗಾರಿಗಳು ಪೂರ್ಣವಾಗದೇ ಬಾಕಿ ಉಳಿದು ಕೊಂಡಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಾಕಿ ಉಳಿದ ಕಾಮಗಾರಿಗಳಲ್ಲಿ ಬಹುತೇಕ ರಸ್ತೆ ಕಾಮಗಾರಿಗಳೇ ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ. ಸುಮಾರು 1,291 ರಸ್ತೆ ಕಾಮಗಾರಿಗಳು ಹಲವು ವರ್ಷಗಳಿಂದ ಪೂರ್ಣವಾಗದೇ ಹಾಗೇ ಬಾಕಿ ಉಳಿದುಕೊಂಡಿದೆ. ನೀರಾವರಿ ಕಾಮಗಾರಿಗಳಲ್ಲಿ 274 ಕಾಮಗಾರಿಗಳು ಇನ್ನೂ ಪೂರ್ಣವಾಗಿಲ್ಲ. ಕಾಮಗಾರಿ ವಿಳಂಬಕ್ಕೆ ಲೋಕೋಪಯೋಗಿ ಇಲಾಖೆ ಯಾವುದೇ ಕಾರಣವನ್ನು ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒದಗಿಸಿದ ಅನುದಾನಕ್ಕಿಂತ ಕಡಿಮೆ ವೆಚ್ಚ:
ಸಿಎಜಿ ವರದಿಯಲ್ಲಿ ವಿವಿಧ ಯೋಜನೆಗಳಿಗೆ ನೀಡಲಾದ ಒಟ್ಟು ಅನುದಾನ ಮತ್ತು ಮಾಡಲಾದ ವೆಚ್ಚದಲ್ಲಿ ಸುಮಾರು ಶೇ11ರಷ್ಟು ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಕೊಟ್ಟ ಒಟ್ಟು 29 ವಿವಿಧ ಯೋಜನೆಗಳ ಅನುದಾನಗಳ ಪ್ರತಿ ಕಡಿಮೆ ವೆಚ್ಚವಾಗಿರುವುದರಿಂದ ಸುಮಾರು 29,826.44 ಕೋಟಿ ರೂ. ಉಳಿತಾಯವಾಗಿದೆ. ಧನ ವಿನಿಯೋಗ ಲೆಕ್ಕಪತ್ರದಲ್ಲಿ ಈ ಉಳಿತಾಯ ಮೊತ್ತದ ಶೇ 46ರಷ್ಟು ಕಡಿಮೆ ವೆಚ್ಚ ಮಾಡಿರುವ ಬಗ್ಗೆ ಕಾರಣವನ್ನು ನೀಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜೊತೆಗೆ 23 ವಿವಿಧ ಯೋಜನೆಗಳ ಅನುದಾನಗಳಿಗೆ ಪೂರಕ ಅಂದಾಜು ಮೊತ್ತ 412.10 ಕೋಟಿ ರೂ. ನೀಡಿರುವುದು ಅನಗತ್ಯವಾಗಿ ಪರಿಣಮಿಸಿದೆ. ಈ ಯೋಜನೆಗಳಿಗೆ ಮೂಲ ಮೀಸಲು ಅನುದಾನಕ್ಕಿಂತ ಶೇ 24 ರಷ್ಟು ಕಡಿಮೆ ವೆಚ್ಚವಾಗಿದೆ.
ಓದಿ:ಸಿಡಿ ಪ್ರಕರಣ: ಪೊಲೀಸ್ ತನಿಖೆಯಾಗ್ತಿದೆ, ವೇಟ್ ಮಾಡೋಣ... ಸತೀಶ ಜಾರಕಿಹೊಳಿ