ಬೆಂಗಳೂರು: ಕಾರ್ಮಿಕ ಇಲಾಖೆಯು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ನವೀಕರಣಗೊಳಿಸದ ಕಾರಣದಿಂದ 39.59 ಕೋಟಿ ರೂ. ವಸೂಲಾತಿಯಾಗಿಲ್ಲ ಎಂದು ಭಾರತದ ಲೆಕ್ಕನಿಯಂತ್ರಣಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.
ಮಾರ್ಚ್ 2020ಕ್ಕೆ ಕೊನೆಗೊಂಡ ವೆಚ್ಚಗಳ ಮತ್ತು ರಾಜಸ್ವದ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ವರದಿಯ ಅಧ್ಯಯನ ನಡೆಸಿದೆ. ಈ ಕುರಿತ ಅನುಪಾಲನಾ ವರದಿಯನ್ನು ಸದನದಲ್ಲಿ ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಡಿಸಿದರು. ಈ ವರದಿಯಲ್ಲಿ ಕೆಲ ನ್ಯೂನತೆ, ಲೋಪದೋಷಗಳನ್ನು ಉಲ್ಲೇಖಿಸಲಾಗಿದೆ.
ಪಿಂಚಣಿ ನಿಧಿಯ ನಿಯಮ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ರಾಷ್ಟ್ರೀಯ ಪಿಂಚಣಿ ಪದ್ಧತಿಗೆ ಅನುಗುಣವಾಗಿ ಜಾರಿಗೊಳಿಸಿಲ್ಲ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ನೀಡಿರುವ ಮಾಹಿತಿಯಂತೆ ಫೆ.2015ರಿಂದ ಸೆಪ್ಟೆಂಬರ್ 2016ರವರೆಗಿನ ಅವಧಿಯಲ್ಲಿ ನೌಕರರ ಮತ್ತು ಉದ್ಯೋಗದಾತರ ವಂತಿಗೆಯ ಹಣ 2.40 ಕೋಟಿ ರೂ. ಹೂಡಿಕೆ ಮಾಡಿರಲಿಲ್ಲ. ಹಿಂದಿನ ವಂತಿಗೆಯೊಂದಿಗೆ ಹೂಡಿಕೆ ಮಾಡುವಲ್ಲಿ ವಿಳಂಬದಿಂದ ವಿಶ್ವವಿದ್ಯಾಲಯದ ನೌಕರರಿಗೆ 29.62 ಲಕ್ಷ ರೂ. ನಷ್ಟ ಪರಿಣಿಮಿಸಿದೆ ಎಂದು ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಸಮರ್ಪಕ ಆರ್ಥಿಕ ನಿರ್ವಣೆಯಾಗಿದ್ದು, 12.97 ಲಕ್ಷ ರೂ. ದುರುಪಯೋಗವಾಗಿರುವುದು ಕಂಡು ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯ 2006, ಏ.1ರ ನಂತರ ನೇಮಕಗೊಂಡ ನೌಕರರಿಗೆ ಎನ್‌ಪಿಎಸ್ ಅನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ತಿಳಿಸಿದೆ. ಮಂಗಳೂರು ವಿಶ್ವವಿದ್ಯಾಲಯವು ಯಾವುದೇ ಉತ್ತರ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ದಾಖಲೆಗಳ ತಿರುಚುವಿಕೆಯಿಂದ 1.28 ಲಕ್ಷ ರೂ. ದುರುಪಯೋಗವಾಗಿದೆ. ಚನ್ನಪಟ್ಟಣದಲ್ಲಿ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ಕಾರದ ರಾಜಸ್ವವನ್ನು ಜಮೆ ಮಾಡದಿರುವುದರಿಂದ ಮತ್ತು ದಾಖಲೆಗಳಲ್ಲಿ ಕೈಚಳಕ ಮಾಡಿರುವುದರಿಂದ 1.38 ಲಕ್ಷ ರೂ. ದುರುಪಯೋಗವಾಗಿದೆ ಎಂದು ತಿಳಿಸಿದೆ.