ಬೆಂಗಳೂರು: ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದಂತೆ ಡಾ. ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಂಪುಟ ಸಭೆಯಲ್ಲಿ ಶುಕ್ರವಾರ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಕಸ್ತೂರಿ ರಂಗನ್ ವರದಿ ಹೇಳಿದಂತೆ ಪಶ್ಚಿಮಘಟ್ಟಗಳ ಸುತ್ತಮುತ್ತಲಿನ ಪ್ರದೇಶಗಳಿಂದ ಜನರನ್ನು ಸ್ಥಳಾಂತರ ಮಾಡಲು ಅಸಾಧ್ಯ. ಹೀಗಾಗಿ, ಈ ವರದಿಯನ್ನು ನಾವು ಒಪ್ಪಲು ಸಾಧ್ಯವಿಲ್ಲ ಅಂತ ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರದ ಮುಂದೆ ವರದಿ ವಿರೋಧಿಸಿ ಎರಡು ಸಲ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಇದೀಗ ಮತ್ತೆ ವರದಿ ಒಪ್ಪುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಲು ತೀರ್ಮಾನಿಸಲಾಗಿದೆ. ವಿವರವಾದ ಕಾರಣಗಳನ್ನು ಮುಂದಿನ ದಿನಗಳಲ್ಲಿ ಕೇಂದ್ರಕ್ಕೆ ತಿಳಿಸಲಾಗುವುದು. ಸದ್ಯಕ್ಕೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇರುವ ಕಾರಣ ಕಸ್ತೂರಿ ರಂಗನ್ ವರದಿ ಸ್ವೀಕಾರ ಮಾಡದಿರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಇದನ್ನೂ ಓದಿ:ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ: ಸರಣಿ ಬಂದ್ಗೆ ಕರೆ
ಪ್ರತಿ ಗುರುವಾರ ಸಂಪುಟ ಸಭೆ: ಇನ್ನು ಮುಂದೆ ಪ್ರತಿ ಗುರುವಾರ ಸಂಪುಟ ಸಭೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ. ಹೆಚ್ಚಿನ ಅಜೆಂಡಾಗಳು ಸಂಪುಟ ಸಭೆಯಲ್ಲಿ ಇರಬಾರದು ಎಂಬ ಬಗ್ಗೆ ಚರ್ಚಿಸಲಾಗಿದೆ. ಸಿಎಂ ಕೂಡ ಸಂಪುಟ ಸಭೆಯಲ್ಲಿ 25-30 ವಿಷಯಗಳನ್ನು ಸಭೆಗೆ ತರಬಾರದು, ಆದಷ್ಟು ಪ್ರತಿ ಗುರುವಾರ ಸಂಪುಟ ಸಭೆ ನಡೆಸಬೇಕು ಎಂದು ಸೂಚಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ:ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಕರಡು ಅಧಿಸೂಚನೆಗೆ ವಿರೋಧ: ಸಿಎಂ ನೇತೃತ್ವದಲ್ಲಿ ದಿಲ್ಲಿಗೆ ನಿಯೋಗ
ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಭೂಮಿ ಮಂಜೂರು: ಮಾಜಿ ಕೇಂದ್ರ ಸಚಿವ ದಿ. ಅನಂತ್ ಕುಮಾರ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಅನಂತಕುಮಾರ್ ಪ್ರತಿಷ್ಠಾನಕ್ಕೆ 3 ಎಕರೆ ಭೂಮಿಯನ್ನು ಮಂಜೂರು ಮಾಡಲು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅನಂತ್ ಕುಮಾರ್ ಅವರ ಜನ್ಮಸ್ಥಳವಾದ ಹೆಗ್ಗನಹಳ್ಳಿಯಲ್ಲಿರುವ ಜಮೀನನ್ನು ಪ್ರತಿಷ್ಠಾನಕ್ಕೆ ನೀಡಲು ನಿರ್ಧರಿಸಲಾಗಿದೆ. ಅವರು ಪ್ರತಿಪಾದಿಸಿದ ಸಸ್ಯಾಗ್ರಹ ಮತ್ತು ಹಸಿರು ಜೀವನ ಶೈಲಿಯ ಅನುಷ್ಠಾನ ಸೇರಿದಂತೆ ಮತ್ತಿತರೆ ಚಟುವಟಿಕೆಗಳಿಗಾಗಿ ಅನಂತ್ಕುಮಾರ್ ಪ್ರತಿಷ್ಠಾನವು ಈ ಭೂಮಿಯನ್ನು ಬಳಸಿಕೊಳ್ಳಲಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದರು.
ಇದನ್ನೂ ಓದಿ:ವರ್ಷ ಮುಗಿಸುತ್ತಿರುವ ಬೊಮ್ಮಾಯಿ ಸರ್ಕಾರ: ಕಾಮನ್ ಮ್ಯಾನ್ ಸಿಎಂ ಸರ್ಕಾರದ ಸಾಧನೆಗಳೇನು ?