ಬೆಂಗಳೂರು:ಮಹತ್ವದ ಬೆಳವಣಿಗೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ದಿಢೀರ್ ದೆಹಲಿಗೆ ತೆರಳಿದ್ದಾರೆ. ಸಿಎಂ ವಾಪಸ್ಸಾಗುವ ಮೊದಲೇ ಗೃಹ ಸಚಿವರ ದೆಹಲಿ ಪ್ರವಾಸ ಕುತೂಹಲ ಕೆರಳುವಂತೆ ಮಾಡಿದೆ. ಮಧ್ಯಾಹ್ನವಷ್ಟೇ ವಿಧಾನಸೌಧದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ್ದ ಆರಗ ಜ್ಞಾನೇಂದ್ರ, ಗೃಹ ಇಲಾಖೆಯಲ್ಲಿ ಪಳಗಿದ್ದೇನೆ, ನನಗೆ ಗೃಹ ಖಾತೆ ಸಾಕು ಎನಿಸಿಲ್ಲ. ಆದರೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದರು. ಅದರ ನಡುವೆಯೇ ರಾತ್ರಿ ದಿಢೀರ್ ನವದೆಹಲಿಗೆ ತೆರಳಿದ್ದಾರೆ.
ಹೈಕಮಾಂಡ್ ಬುಲಾವ್ ಮೇರೆಗೆ ಗೃಹ ಸಚಿವರು ದೆಹಲಿಗೆ ತೆರಳಿದ್ದಾರಾ? ಪೂರ್ವನಿಗದಿತ ಕಾರ್ಯಕ್ರಮದ ಭಾಗವಾಗಿ ತೆರಳಿದ್ದಾರಾ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ ಆರಗ ಅವರ ದಿಢೀರ್ ದೆಹಲಿ ಭೇಟಿ ಸಂಪುಟದಲ್ಲಿ ಬದಲಾವಣೆಯ ಸಾಧ್ಯತೆಯನ್ನು ಪುಷ್ಟೀಕರಿಸುವಂತಿದೆ.
ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆ ಬಗ್ಗೆ ಮಾತುಗಳು ದಟ್ಟವಾಗಿ ಕೇಳಿಬರುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಂಪುಟದಲ್ಲಿ ಹಿರಿಯರನ್ನು ಕೈ ಬಿಡುವ ವಿಚಾರ ಕೂಡ ಚರ್ಚೆ ಆಗುತ್ತಿದೆ. ಈ ಬಗ್ಗೆ ಸಚಿವ ಬಿ.ಸಿ.ಪಾಟೀಲ್ ಕುಮಾರಕೃಪಾ ಗೆಸ್ಟ್ ಹೌಸ್ನಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿ, ಕೃಷಿಯಲ್ಲಿ ನಾನು ಖುಷಿಯಾಗಿದ್ದೇನೆ. ಮಳೆ ಚೆನ್ನಾಗಿ ಆಗುತ್ತಿದೆ. ಬೆಳೆ ಚೆನ್ನಾಗಿ ಬರುತ್ತದೆ. ಮುಖ್ಯಮಂತ್ರಿಗಳ ಪರಮಾಧಿಕಾರ, ಹೈಕಮಾಂಡ್ ನಾಯಕರು ಎಲ್ಲವನ್ನೂ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಅವರಿಗೆ ಖಂಡಿತಾ ಸಿಗುತ್ತದೆ. ರಮೇಶ್ ಜಾರಕಿಹೊಳಿ ಸಂಪುಟ ಸೇರಬೇಕು. ಅವರು ಬಹಳ ಶ್ರಮವಹಿಸಿದ್ದಾರೆ. ಯಾರದ್ದೋ ಷಡ್ಯಂತ್ರದಿಂದ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಈಗ ಅವರಿಗೆ ಸಚಿವ ಸ್ಥಾನ ಸಿಗಬೇಕು. ಈ ಬಗ್ಗೆ ಸಿಎಂ ಹಾಗೂ ವರಿಷ್ಠರ ಜೊತೆ ಚರ್ಚೆ ಮಾಡಿದ್ದೇವೆ. ಅವರಿಗೆ ಸಂಪುಟದಲ್ಲಿ ಅವಕಾಶ ಕೊಡಬೇಕು ಎಂದ ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.
ಇದನ್ನೂ ಓದಿ: ಮೇಲ್ಮನೆ ಚುನಾವಣೆ ಪ್ರಕಟ : ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ!?