ನವದೆಹಲಿ/ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜೊತೆ ಮಾತುಕತೆ ನಡೆಸಿದ್ದು, ರಾಜ್ಯ ಕಾರ್ಯಕಾರಿಣಿ ನಂತರ ಈ ಬಗ್ಗೆ ನಿರ್ಧಾರ ಮಾಡೋಣ ಎಂದು ತಿಳಿಸಿದ್ದಾರೆ ಎಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.
ಜೆ ಪಿ ನಡ್ಡಾ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಥೂಲವಾಗಿ ಚರ್ಚೆಯಾಗಿದೆ. ಅವರು ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ಕಾರ್ಯಕಾರಣಿ ಸಭೆಗೆ ಬಂದಾಗ ಉಳಿದ ವಿಚಾರಗಳನ್ನು ಚರ್ಚಿಸೋಣ ಎಂದು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೊತೆ ಚರ್ಚೆ ಮಾಡಿ ಮತ್ತೊಮ್ಮೆ ತೀರ್ಮಾನ ಮಾಡೋಣ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ನವದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಒಂದು ರೀತಿಯಲ್ಲಿ ಚುನಾವಣೆಗೆ ಏನು ತಯಾರಿ ಮಾಡಬೇಕು ಎನ್ನುವ ತೀರ್ಮಾನಗಳ ಕುರಿತು ರಾಜ್ಯ ಕಾರ್ಯಕಾರಿಣಿ ಸಮಿತಿಯಲ್ಲಿ ತೀರ್ಮಾನ ಮಾಡೋಣ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಿ ಎಂದು ಜೆ ಪಿ ನಡ್ಡಾ ಸೂಚನೆ ಕೊಟ್ಟಿದ್ದಾರೆ. ಅಮಿತ್ ಶಾ ಅವರನ್ನು ಭೇಟಿಯಾಗಲಿಲ್ಲ, ನಿನ್ನೆ ಸಂಸತ್ತಿನಲ್ಲಿ ಮಸೂದೆಗಳು ವಿಳಂಬವಾಗಿದ್ದರಿಂದ ಸಮಯಾವಕಾಶ ಲಭ್ಯವಾಗಲಿಲ್ಲ, ಮತ್ತೆ ಅವಕಾಶ ಸಿಕ್ಕಾಗ ಭೇಟಿ ಮಾಡುತ್ತೇನೆ ಎಂದರು.
ಈ ಬಾರಿಯ ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ, ಪರಿಸರ ಖಾತೆ, ಹಣಕಾಸು ಇಲಾಖೆ, ರಕ್ಷಣಾ ಇಲಾಖೆಯ ಸಚಿವರನ್ನು ಭೇಟಿ ಮಾಡಿದ್ದು, ಎಲ್ಲರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಬಿಜೆಪಿ ಸ್ಥಾಪನಾ ದಿನದಂದು ಪಕ್ಷದ ಕೇಂದ್ರ ಕಚೇರಿಯಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತೋಷದ ವಿಚಾರವಾಗಿದೆ. ಈಗ ಬೆಂಗಳೂರಿಗೆ ಹೋದ ತಕ್ಷಣವೇ ಬಜೆಟ್ನಲ್ಲಿ ಪ್ರಕಟಿಸಿರುವುದನ್ನು ಆದ್ಯತೆ ಮೇಲೆ ಒಂದೊಂದಾಗಿ ಪರಿಶೀಲಿಸಿ ಪೂರ್ವ ತಯಾರಿ ಪೂರ್ಣಗೊಳಿಸಿ ಅನುಷ್ಠಾನಗೊಳಿಸಲು ಹೆಚ್ಚಿನ ಒತ್ತು ಕೊಡಲಾಗುತ್ತದೆ ಎಂದರು.
(ಇದನ್ನೂ ಓದಿ: ಸಿಎಂ ದೆಹಲಿ ಯಾತ್ರೆ; ಇಂದು ನಡ್ಡಾ, ಅಮಿತಾ ಶಾ ಭೇಟಿ, ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಸಾಧ್ಯತೆ!)