ಬೆಂಗಳೂರು:ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಪರ ನಿಂತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಸಂಪುಟ ಸಭೆಯಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ. ಈ ವೇಳೆ ಸಚಿವ ಸಿ.ಪಿ.ಯೋಗೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸಂಪುಟ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿಗೆ ಎರಡು ಬೃಹತ್ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ರೇಣುಕಾಚಾರ್ಯ ಕ್ಷೇತ್ರದ ವ್ಯಾಪ್ತಿಗೆ ಬರುವ ಹೊನ್ನಾಳಿ ತಾಲೂಕಿಗೆ ಬರೋಬ್ಬರಿ 582 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ. ದಾವಣಗೆರೆಯ ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಬರುವ 94 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವ 415 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯಿಂದ ರೇಣುಕಾಚಾರ್ಯಗೆ ಸಿಹಿ ಸುದ್ದಿ; ಸಚಿವ ಸಿ.ಪಿ.ಯೋಗೇಶ್ವರ್ ಕ್ಯಾತೆ!
ಸಿಎಂ ಯಡಿಯೂರಪ್ಪ ಪರ ಸಹಿ ಸಂಗ್ರಹ ಮಾಡಿದ್ದ ರೇಣುಕಾಚಾರ್ಯಗೆ ಸಚಿವ ಸಂಪುಟ ಸಭೆಯಿಂದ ಸಿಹಿಸುದ್ದಿ ಸಿಕ್ಕಿದೆ. ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ ಅವರ ಕ್ಷೇತ್ರ ವ್ಯಾಪ್ತಿಗೆ ಬರುವ ಹೊನ್ನಾಳಿ ತಾಲೂಕಿಗೆ ಬರೋಬ್ಬರಿ 582 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ.
ಇನ್ನು, ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಎರಡು ಹಂತಗಳಲ್ಲಿ ಒಟ್ಟಾರೆ 167 ಕೋಟಿ ರೂ. ವೆಚ್ಚದಲ್ಲಿ (ಹಂತ 1ರಲ್ಲಿ ರೂ. 121 ಕೋಟಿ ರೂ. ಮತ್ತು ಎರಡನೇ ಹಂತದಲ್ಲಿ ರೂ. 46 ಕೋಟಿ ರೂ.) ಕೈಗೊಳ್ಳುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ನಾಯಕತ್ವ ಬದಲಾವಣೆ ವಿಚಾರದಲ್ಲಿ ಯಡಿಯೂರಪ್ಪ ಪರ ಸಹಿ ಸಂಗ್ರಹ ಮಾಡುವ ಮೂಲಕ ರೇಣುಕಾಚಾರ್ಯ ಸಿಎಂ ಪರ ಬ್ಯಾಟಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಅವರ ಕ್ಷೇತ್ರಕ್ಕೆ ಎರಡು ಬಂಪರ್ ಕೊಡುಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಕೇಸ್; 2 ಕೋಟಿ ರೂ. ಪರಿಹಾರ ನೀಡಲು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ ಕೋರ್ಟ್ ಆದೇಶ
ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ಸಚಿವ ಸಿ.ಪಿ.ಯೋಗೇಶ್ವರ್ ಧ್ವನಿ ಎತ್ತಿದ್ದಾರೆ. ಅಜೆಂಡಾದಲ್ಲಿ ದಾವಣಗೆರೆ ಜಿಲ್ಲೆಯ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಅಂತ ಉಲ್ಲೇಖಿಸಲಾಗಿದ್ದು, ಹೊನ್ನಾಳಿ ತಾಲೂಕು ಎಂದು ಉಲ್ಲೇಖಿಸಿರಲಿಲ್ಲ. ಸಂಪುಟ ಸಭೆಯಲ್ಲೇ ಸಿ.ಪಿ.ಯೋಗೇಶ್ವರ್ ಸಾಸ್ವೆಹಳ್ಳಿ ಯಾವ ತಾಲೂಕು ಬರುತ್ತೆ ಎಂದು ಕೇಳುತ್ತಾರೆ. ಆಗ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಹೊನ್ನಾಳಿ ತಾಲೂಕು ಎಂದು ಹೇಳುತ್ತಾರೆ.
ಇದೇ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಬೊಮ್ಮಾಯಿ ಅದು ನಾಬಾರ್ಡ್‌ಅಡಿ ಬರುವ ಯೋಜನೆ ಎಂದು ಸಮಜಾಯಿಷಿ ನೀಡುತ್ತಾರೆ. ಆಗ ಸಿ.ಪಿ.ಯೋಗೇಶ್ವರ್ ನಬಾರ್ಡ್ ನಡಿ ಬಂದರೂ ಆ ಸಾಲದ ಹಣವನ್ನು ರಾಜ್ಯ ಸರ್ಕಾರವೇ ಪಾವತಿಸಬೇಕಲ್ಲಾ ಎಂದು ಪ್ರಶ್ನಿಸಿದ್ದಾರೆ.