ಬೆಂಗಳೂರು: ಪಂಜಾಬ್ ಕಾಂಗ್ರೆಸ್‌ನ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ರಾಜ್ಯ ಕಾಂಗ್ರೆಸ್‌ನಲ್ಲೂ ಇದೆ. ಅದ್ಯಾವಾಗ ಧಗ್ ಎಂದು ಹೊತ್ತಿಕೊಳ್ಳುತ್ತದೋ ಆ ದೇವರೇ ಬಲ್ಲ. ʼಕ್ಯಾಪ್ಟನ್ʼ ಇಲ್ಲದ ಹಡಗು ಸಾಗರದಲ್ಲಿ ದಿಕ್ಕೆಟ್ಟು ಓಡುತ್ತಿದೆ. ಇನ್ನೇನು ಮುಳುಗುವ ಹಂತಕ್ಕೆ ಬಂದಿದೆ. ಪಂಜಾಬ್‌ನ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಕ್ಷ ಬಿಟ್ಟು ಹೊರಡಲು ಸಿದ್ದರಾಗಿದ್ದಾರೆ. ಸ್ಥಿರ ನಾಯಕತ್ವವಿಲ್ಲದ ಪಕ್ಷದಲ್ಲಿ ಈ ದೇಶವನ್ನು ಭವಿಷ್ಯದಲ್ಲಿ ಮುನ್ನಡೆಸಲು ಸಾಧ್ಯವೇ? ಎಂದು ಮಾಜಿ ಸಚಿವ ಸಿಟಿ ರವಿ ಟ್ವೀಟ್ ಮಾಡಿದ್ದಾರೆ.
ಅಸ್ಥಿರ ಮನಸ್ಸಿನ ನವಜೋತ್ ಸಿಂಗ್ ಸಿಧು ಅಧಿಕಾರಕ್ಕಾಗಿ ಜೋತು ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಏನೇನೋ ಸೆಣಸಾಟ. ದಲಿತ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ನೇಮಿಸಿ ಅಧಿಕಾರ ಮಾಡಲು ಬಿಡದ ಕಾಂಗ್ರೆಸ್ ಪಕ್ಷದ "ದಲಿತರ ಮೇಲೆ ಬರೀ ತೋರಿಕೆ ಪ್ರೀತಿ, ಅಧಿಕಾರದ ಮೇಲೆ ಆಸೆ" ಎದ್ದೆದ್ದು ತೋರುತ್ತಿದೆ ಎಂದು ಟೀಕಿಸಿದ್ದಾರೆ.
ನಮ್ಮ ಪ್ರಧಾನಿ ನರೇಂದ್ರ ಮೋದಿ ಏಕ ಕಾಲದಲ್ಲೇ ತಮ್ಮ ಸಂಪುಟಕ್ಕೆ 8 ದಲಿತ ಸಚಿವರನ್ನು ನೇಮಿಸಿಕೊಂಡಾಗ ಕಾಂಗ್ರೆಸ್ ಪಕ್ಷದ ಮುಖಂಡರು ಚುಚ್ಚುವ ಮಾತನಾಡಿದ್ದರು. ಈಗ ನಾಲ್ಕು ತಿಂಗಳು ದಲಿತರಿಗೆ ಪಂಜಾಬ್ನಲ್ಲಿ ಅಧಿಕಾರ ಕೊಟ್ಟು "ಮೊಣಕೈಗೆ ಬೆಣ್ಣೆ ಹಚ್ಚಿ ತಿನ್ನಿ" ಎಂದು ಹೇಳಿದಂತಿದೆ. ಈ ನಾಟಕ ಬುದ್ಧಿವಂತ ಜನರಿಗೆ ಅರ್ಥವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.