ಬೆಂಗಳೂರು: ಬಿಟ್ ಕಾಯಿನ್ ವಿಚಾರದಲ್ಲಿ ನಾವ್ಯಾರೂ ಸಮರ್ಥನೆಗೆ ಮುಂದಾಗಿಲ್ಲ. ಕಾಂಗ್ರೆಸ್ನವರಂತೆ ನಾವು ಕೂಡ ಆಧಾರ ರಹಿತ ಆರೋಪ ಮಾಡಬಹುದು. ಪಂಚೆ ಧರಿಸುವ ಮಾಜಿ ಮುಖ್ಯಮಂತ್ರಿಯ ಪುತ್ರನಿಗೆ ಶ್ರೀಕಿ ಜೊತೆ ಸಂಬಂಧ ಇದೆ ಎನ್ನಬಹುದು. ಆದರೆ ನಾವು ಆ ರೀತಿ ಆರೋಪ ಮಾಡಲ್ಲ. ಕಾಂಗ್ರೆಸ್ ಬಳಿ ದಾಖಲೆ ಇದ್ದರೆ ಸುಪ್ರೀಂ ಕೋರ್ಟ್ಗೆ ಹೋಗಿ ತನಿಖೆಗೆ ಬೇಡಿಕೆ ಮಂಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಯಾರ ಮೇಲೆ ನಂಬಿಕೆ ಇದೆಯೋ ಅವರಿಗೆ ದಾಖಲೆ ಕೊಡಲಿ. ನ್ಯಾಯಾಂಗದ ಮೇಲೆ ನಂಬಿಕೆ ಇದ್ದರೆ ಅಲ್ಲಿಗೆ ಆಧಾರಗಳನ್ನು ಕೊಡಲಿ. ಸಿಬಿಐ ಮೇಲೆ ವಿಶ್ವಾಸವಿದ್ದರೆ ಅವರಿಗೆ ಕೊಡಲಿ. ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದ್ದರೆ ಅವರಿಗೆ ಕೊಡಲಿ. ಅದನ್ನು ಬಿಟ್ಟು ಆಧಾರ ರಹಿತವಾಗಿ ಆರೋಪ ಮಾಡಿದರೆ ಹೇಗೆ? ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಫ್ಐಆರ್ ದಾಖಲಾಗಿದೆ. ಆರೋಪಪಟ್ಟಿಯನ್ನೂ ಸಹ ಸಲ್ಲಿಸಿದ್ದು ಬಿಜೆಪಿ ಸರ್ಕಾರ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.
ಈ ಹಿಂದೆ ಶ್ರೀಕಿ ಸಂಬಂಧ ಯಾರ ಜೊತೆಯಲ್ಲಿತ್ತು? ಮಲ್ಯ ಟವರ್ ಬಳಿ ಯಾರ ಜೊತೆ ಪಾರ್ಟಿ ಮಾಡುತ್ತಾ ಕುಳಿತಿದ್ದ? ಬಿಜೆಪಿ ಶಾಸಕನ ಮಗನ ಜೊತೆಯಲ್ಲೋ ಕಾಂಗ್ರೆಸ್ ಶಾಸಕನ ಮಗನ ಜೊತೆಯಲ್ಲೋ?. ಮಲ್ಯ ಟವರ್ ಬಳಿ ದೌರ್ಜನ್ಯ ನಡೆಸಿದಾಗ ಅವರ ಜೊತೆ ಇದ್ದ ವ್ಯಕ್ತಿ ಯಾರು ಎಂದು ಬಹಿರಂಗಪಡಿಸಲಿ. ಯಾವ ಪಕ್ಷದ ಶಾಸಕ ಎಂದು ಬಹಿರಂಗ ಪಡಿಸಲಿ. ಆಗ ಸತ್ಯ ಏನೆಂದು ಗೊತ್ತಾಗುತ್ತದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ಗೆ ತಿರುಗೇಟು ನೀಡಿದರು.