ಬೆಂಗಳೂರು: ಸಂಪುಟ ರಚನೆಯಾಗಿಲ್ಲ ಎನ್ನುವವರು ತಮ್ಮದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಖಾಲಿ ಇದ್ದು ಎಷ್ಟು ದಿನವಾಯಿತು ಎಂದು ಒಮ್ಮೆ ನೋಡಿಕೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವನ್ನು ಏಕಚಕ್ರಾಧಿಪತ್ಯ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ ನಮ್ಮ ಸಿಎಂ ನಿರಂತರವಾಗಿ ಜನಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನೇಕಾರರ ಸಾಲ ಮನ್ನಾ, ರೈತರ ಖಾತೆಗೆ 4000 ಹಣ ಕೊಡುವ ನಿರ್ಣಯ, ಮೀನುಗಾರರ ಸಾಲ ಮನ್ನಾ ಬಗ್ಗೆ ನಿರ್ಣಯ, ಅತಿವೃಷ್ಟಿ-ಅನಾವೃಷ್ಟಿಗೆ ಸಂಬಂಧಪಟ್ಟಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಡಳಿತ ಚುರುಕಿಗೆ ಕ್ರಮ, ಕೊಡಗಿನ ಅತಿವೃಷ್ಟಿ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಜನಹಿತದ ಕ್ರಮ ಕೈಗೊಳ್ಳುವ ಕೆಲಸವಾಗಿದೆ ಎಂದು ಉತ್ತರ ನೀಡಿದರು.
ಹೋಟೆಲ್ನನ್ನೇ ಮುಖ್ಯಮಂತ್ರಿಗಳ ಕಚೇರಿಯನ್ನಾಗಿ ಮಾಡಿಕೊಂಡು ರಾಜಕೀಯ ಹೊಸ ಭಾಷ್ಯ ಬರೆಯುವ ಕೆಲಸವನ್ನು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿಲ್ಲ. ರಾಜ್ಯದ ಹಿತದ ಹೆಸರಿನಲ್ಲಿ ಕುಟುಂಬದ ರಕ್ಷಣೆ ಮಾಡುವ ಕೆಲಸವನ್ನು, ಸಮ್ಮಿಶ್ರ ಸರ್ಕಾರದ ಹೆಸರಿನಲ್ಲಿ ಕೆಲವು ಜಿಲ್ಲೆಗಳನ್ನು ಮಾತ್ರ ಅಭಿವೃದ್ಧಿಗೆ ಪರಿಗಣಿಸುವ ಕೆಲಸ ನಮ್ಮ ಮುಖ್ಯಮಂತ್ರಿ ಮಾಡಿಲ್ಲ. ಇನ್ನೊಬ್ಬರ ಬಗ್ಗೆ ಆರೋಪ ಮಾಡುವ ಮೊದಲು ತಮ್ಮ ಪಕ್ಷದ ಅಧ್ಯಕ್ಷರ ಕಥೆಯೇನು? ಅವರ ತಲೆ ಹೋಗಿ ಎಷ್ಟು ದಿನ ಆಗಿದೆ ಎನ್ನುವುದನ್ನ ನೋಡಿಕೊಳ್ಳಲಿ. ನಿಮ್ಮ ಪಕ್ಷಕ್ಕೆ ಒಬ್ಬ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲು ಎಷ್ಟು ದಿನ ಬೇಕು? ಅದಕ್ಕೆ ಉತ್ತರ ಹುಡುಕಿ, ಆಗ ರಾಜ್ಯದ ಆಡಳಿತಕ್ಕೆ ಉತ್ತರ ಸಿಗಲಿದೆ ಎಂದು ವ್ಯಂಗ್ಯವಾಡಿದರು.
ಸಂಪುಟ ವಿಸ್ತರಣೆಯಾಗಲಿದೆ. ಸಮಗ್ರ ರಾಜ್ಯದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ರಚನೆ ಮಾಡಲಾಗುತ್ತದೆ. ಕೇಂದ್ರದಲ್ಲಿ ಪ್ರಮುಖ ನಿರ್ಣಯವನ್ನು ಕೈಗೊಳ್ಳುವ ಸಂದರ್ಭ ಇದ್ದ ಕಾರಣ ವಿಳಂಬವಾಗಿದೆ. ಕರ್ನಾಟಕದ ಬಗ್ಗೆ ಇನ್ನೆರಡು ದಿನದಲ್ಲಿ ಕ್ಲೀಯರ್ ಮಾಡಿಕೊಡಲಿದ್ದಾರೆ ಎಂದು ಸಂಪುಟ ರಚನೆ ವಿಳಂಬಕ್ಕೆ ಕಾರಣ ನೀಡಿದರು.