ಬೆಂಗಳೂರು:ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಪುಟ ಸೇರುವವರು ಯಾರು? ಎಂಬ ಬಗ್ಗೆ ಲೆಕ್ಕಾಚಾರ ಪ್ರಾರಂಭವಾಗಿದೆ.
ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಯ ದಿನಾಂಕ ನಿಗದಿಗೊಳಿಸುತ್ತಿದ್ದ ಹಾಗೆಯೇ ಬಿಜೆಪಿ ಪಾಳಯದಲ್ಲಿ ಲೆಕ್ಕಚಾರದ ಮಾತುಗಳು ಕೇಳಿಸುತ್ತಿವೆ. 10 ಮಂದಿ ಅರ್ಹ ಶಾಸಕರಿಗೆ ಹಾಗೂ 3 ಮಂದಿ ಮೂಲ ಬಿಜೆಪಿ ಶಾಸಕರಿಗೆ ಸಚಿವ ಭಾಗ್ಯ ಸಿಗಲಿದೆ ಎಂಬ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಆದರೆ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಬಿಎಸ್‌ವೈ ಸಂಪುಟಕ್ಕೆ ಒಟ್ಟು 13 ಶಾಸಕರು ಮಂತ್ರಿ ಸ್ಥಾನ ಪಡೆಯಲಿದ್ದಾರೆ. 10+ 3 ನಿಯಮದ ಪ್ರಕಾರ, ನೂತನ ಸಂಪುಟ ವಿಸ್ತರಣೆ ನಡೆಯಲಿದೆ. ಗೆದ್ದ 11 ರಲ್ಲಿ 10 ಶಾಸಕರಿಗೆ ಮಂತ್ರಿ ಸ್ಥಾನ ಸಿಗಲಿದೆ. ಹಾಗಾದ್ರೆ ಯಾರಿಗೆ ಮಂತ್ರಿ ಸ್ಥಾನವಿಲ್ಲ ಎಂಬುದೇ ಸದ್ಯದ ಕುತೂಹಲ. ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್ ಗೆ ಮಂತ್ರಿಸ್ಥಾನ ಸಿಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಈ ಇಬ್ಬರಲ್ಲಿ ಯಾರಿಗೆ ಮಂತ್ರಿಸ್ಥಾನ ಕೈ ತಪ್ಪಲಿದೆ? ಎಂಬ ಬಗ್ಗೆ ಸಿಎಂ ತಿಳಿಸಲಿಲ್ಲ.
ಇನ್ನು ಮೂಲ ಬಿಜೆಪಿಗರಿಗೆ ಮೂರು ಮಂತ್ರಿ ಸ್ಥಾನ ಸಿಗಲಿದೆ. ಸಚಿವ ಸ್ಥಾನಕ್ಕೆ ಈಗಾಗಲೇ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬುದು ಎಲ್ಲರ ಕುತೂಹಲ. ಬಿಜೆಪಿ ಪಾಳಯದಲ್ಲಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಹಾಲಪ್ಪ ಆಚಾರ್, ಸಿ. ಪಿ. ಯೋಗೇಶ್ವರ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಮಂತ್ರಿಗಿರಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಈ ಪೈಕಿ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಸಿ. ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಕೇಳಿ ಬರುತ್ತಿದೆ. ಯಾವುದಕ್ಕೂ ಗುರುವಾರದವರೆಗೆ ಕಾದು ನೋಡಿ ಎಂದು ಹೇಳಿರುವ ಸಿಎಂಸಂಪುಟ ಕುತೂಹಲವನ್ನೂ ಕಾಯ್ದುಕೊಂಡಿದ್ದಾರೆ.