ಬೆಂಗಳೂರು : ರಾಜ್ಯದ ಲಕ್ಷಾಂತರ ಮಂದಿ ಬಿ ಖಾತಾ ನಿವೇಶನದಾರರಿಗೆ ಬಂಪರ್ ಕೊಡುಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇನ್ನೆರಡು ತಿಂಗಳಲ್ಲಿ ಎ ಖಾತಾ ಒದಗಿಸಲು ನಿರ್ಧರಿಸಿದೆ. ಎ ಖಾತಾ ಪಡೆಯುವ ನಿವೇಶನದಾರರು ಇನ್ನು ಮುಂದೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಸೇರಿದಂತೆ ಹಲವು ಸೌಲಭ್ಯಗಳನ್ನುಪಡೆಯಲು ಸಾಧ್ಯವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಖಾತಾದಾರರಿಗೆ ಎ ಖಾತಾ ನೀಡುವ ಸಂಬಂಧ ಹಲವು ಕಾಲದಿಂದ ಬೇಡಿಕೆ ಕೇಳಿ ಬರುತ್ತಲೇ ಇತ್ತು. ಈ ಸಂಬಂಧ ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಇಲಾಖೆಯ ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿ, ಬಿ ಖಾತೆದಾರರಿಗೆ ಇನ್ನೆರಡು ತಿಂಗಳಲ್ಲಿ ಎ ಖಾತಾ ಮಂಜೂರು ಮಾಡುವಂತೆ ಸೂಚಿಸಿದ್ದಾರೆ.
ಬಿ ಖಾತಾ ನಿವೇಶನದಾರರು ತಮ್ಮ ನಿವೇಶನ ಅಥವಾ ಅಲ್ಲಿ ಕಟ್ಟಿರುವ ಮನೆ, ಕಟ್ಟಡವನ್ನು ಅಡಮಾನವಾಗಿಟ್ಟು ಬ್ಯಾಂಕುಗಳಿಂದ ಸಾಲ ಪಡೆಯಲು ಇದುವರೆಗೆ ಸಾಧ್ಯವಿರಲಿಲ್ಲ. ಅದೇ ರೀತಿ, ಇನ್ನೂ ಹಲವು ಸೌಲಭ್ಯಗಳು ಅವರಿಗೆ ದೊರೆಯುತ್ತಿರಲಿಲ್ಲ. ಆದರೆ ಈಗ ಬಿ ಖಾತಾದಾರರಿಗೆ ಎ ಖಾತಾ ನೀಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದರು.
ಒತ್ತುವರಿ ತೆರವು:ಈ ಮಧ್ಯೆ ಅಭಿವೃದ್ಧಿ ಪ್ರಾಧಿಕಾರಿಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಲೇ ಔಟುಗಳಲ್ಲಿ ನಾಗರಿಕ ಬಳಕೆಗೆ ಎಂದು ಮೀಸಲಿಟ್ಟ ಸಿ.ಎ ನಿವೇಶನಗಳು ಸಮರ್ಪಕ ನಿರ್ವಹಣೆಯಿಲ್ಲದೇ ಒತ್ತುವರಿಯಾಗುತ್ತಿರುವ ಕುರಿತು ಸರ್ಕಾರಕ್ಕೆ ದೂರುಗಳು ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿರುವ ಸಿ.ಎ ನಿವೇಶನಗಳ ವಿವರ ಒದಗಿಸುವಂತೆ ಸೂಚಿಸಲಾಗಿದೆ. ಈ ವಿವರ ದೊರೆತ ನಂತರ ಒತ್ತುವರಿದಾರರಿದ್ದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಲಾಗುವುದು. ನಂತರ ಅವುಗಳ ಬಳಕೆಯ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದರು.