ಬೆಂಗಳೂರು: ಉಪ ಚುನಾವಣಾ ಪ್ರಚಾರದ ಅಖಾಡಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆ ಕಾರ್ಯ ಮುಗಿಯುತ್ತಿದ್ದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಏಪ್ರಿಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ಮೂರು ಕ್ಷೇತ್ರಗಳಲ್ಲಿ ಎರಡೆರಡು ದಿನ ಸಿಎಂ ಪ್ರಚಾರ ಮಾಡಲಿದ್ದಾರೆ. ನಿಯೋಜಿತ ದಿನಾಂಕದಂದು ಸಮಾವೇಶಗಳನ್ನು ನಡೆಸಲು ಆಯೋಜನೆ ಮಾಡಲಾಗುತ್ತಿದೆ. ಬಹಿರಂಗ ಪ್ರಚಾರ, ಮೆರವಣಿಗೆ ಮೂಲಕ ಬಿಎಸ್ವೈ ತಮ್ಮ ಅಭ್ಯರ್ಥಿಗಳ ಪರ ಮತ ಬೇಟೆ ನಡೆಸಲಿದ್ದಾರೆ.
ಪ್ರತಿಷ್ಠೆಯ ಕಣವಾಗಿರುವ ಉಪ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಸುಲಭದಲ್ಲಿ ಗೆಲುವು ಸಿಕ್ಕುವುದಿಲ್ಲ ಎನ್ನುವುದು ಆಡಳಿತಾರೂಢ ಪಕ್ಷಕ್ಕೆ ಮನವರಿಕೆಯಾಗಿರುವ ಕಾರಣ ಇಡೀ ಸಂಪುಟವನ್ನೇ ಉಪ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಸದ್ಯ ನಾಮಪತ್ರ ಸಲ್ಲಿಕೆ ಕಾರ್ಯ ಬಾಕಿ ಇದ್ದು, ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿಯಿಂದ ಅಬ್ಬರದ ಚುನಾವಣಾ ಪ್ರಚಾರ ನಡೆಯಲಿದೆ.
ಪಂಚರಾಜ್ಯ ಚುನಾವಣೆ ಹಿನ್ನೆಲೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳಕ್ಕೆ ತೆರಳಿರುವ ಬಿಜೆಪಿ ನಾಯಕರು, ಸಚಿವರು ವಾಪಸಾಗಲಿದ್ದು, ಏಪ್ರಿಲ್ ಮೊದಲ ದಿನದಿಂದಲೇ ಪ್ರಚಾರ ಕಾರ್ಯಕ್ಕೆ ಧುಮುಕಲಿದ್ದಾರೆ.
ಒಟ್ಟಿನಲ್ಲಿ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಪಕ್ಷ ಜಯಕ್ಕಾಗಿ ತಂತ್ರಗಾರಿಕೆ ನಡೆಸುತ್ತಿದೆ. ಆದ್ರೆ ಮತದಾರರು ಯಾರ ಕಡೆ ವಾಲುತ್ತಾರೆ ಎಂಬುದು ಮಾತ್ರ ಫಲಿತಾಂಶದ ನಂತರ ಗೋತ್ತಾಗಲಿದೆ.