ಬೆಂಗಳೂರು: ಅಡಿಕೆ ಕುಟ್ಟುವ ಕಬ್ಬಿಣದ ರಾಡ್‌ನಿಂದ ಹೊಡೆದು ಅತ್ತೆಯನ್ನು ಕೊಂದು ದರೋಡೆಕೋರರ ಕಥೆ ಕಟ್ಟಿದ್ದ ಸೊಸೆಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಬ್ಯಾಟರಾಯನಪುರದ ಸೌಂದರ್ಯ ಬಂಧಿತ ಸೊಸೆ. ಇದೇ18ರಂದು ಸಂಜೆ 4 ಗಂಟೆಗೆ ಸೌಂದರ್ಯ ತನ್ನ ಅತ್ತೆ ರಾಜಮ್ಮ (60) ಎಂಬುವರನ್ನು ಹತ್ಯೆ ಮಾಡಿದ್ದಳು. ಶಂಕೆ ಮೇರೆಗೆ ಸೌಂದರ್ಯಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಬ್ಯಾಟರಾಯನಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಚಿನ್ನಕ್ಕಾಗಿ ಮನೆ ನುಗ್ಗಿದ ಅಪರಿಚಿತರು... ಒಂಟಿ ಮಹಿಳೆ ಕೊಲೆ ಮಾಡಿ ಪರಾರಿ
ಪ್ರಕರಣದ ಹಿನ್ನೆಲೆ
ಕುಮಾರ್ ಮತ್ತು ಸೌಂದರ್ಯ ದಂಪತಿಗೆ 10 ತಿಂಗಳ ಮಗುವಿದ್ದು, ತಾಯಿ ರಾಜಮ್ಮ ಅವರ ಜತೆ ಬ್ಯಾಟರಾಯನಪುರದ 5ನೇ ಕ್ರಾಸ್‌ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಮನೆಯಲ್ಲಿಯೇ ಇರುತ್ತಿದ್ದಳು. ಫೆ.18ರಂದು ರಾಜಮ್ಮ ಅವರಿಗೆ ಅನಾರೋಗ್ಯವಾದ ಹಿನ್ನೆಲೆ ಕುಮಾರ್ ವೈದ್ಯರಿಗೆ ಕರೆ ಮಾಡಿದ್ದು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹಾಗಾಗಿ ಸಂಜೆ 4.30ಕ್ಕೆ ದ್ವಿಚಕ್ರ ವಾಹನದಲ್ಲಿ ಟಿ.ಆರ್.ಮಿಲ್ ಸಮೀಪದಲ್ಲಿರುವ ವೈದ್ಯರ ಭೇಟಿಗಾಗಿ ಹೋಗುತ್ತಿದ್ದರು.
ದ್ವಿಚಕ್ರವಾಹನದಲ್ಲಿ ಹೋಗುತ್ತಿರುವಾಗ ಪತ್ನಿ ಹಾಗೂ ನೆರೆ ಮನೆಯವರಿಂದ ಕರೆ ಬಂದಿದ್ದು, ಬೇಗ ಮನೆಗೆ ಬರುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರ್ ಮನೆಗೆ ವಾಪಸ್ ಆಗಿದ್ದು, ತನ್ನ ತಾಯಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದ್ದು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು.
ಕಥೆ ಕಟ್ಟಿದ ಸೌಂದರ್ಯ:
ಸಂಜೆ 4 ಗಂಟೆಗೆ ಅತ್ತೆಯ ಜತೆ ಮನೆಯಲ್ಲಿದ್ದೆ, ಈ ವೇಳೆ ಅಪರಿಚಿತನೊಬ್ಬ ಮನೆಗೆ ನುಗ್ಗಿ, ನನ್ನ ಕೈಗಳನ್ನು ಹಿಡಿದು ಕೊಠಡಿಯೊಳಗೆ ಎಳೆದೊಯ್ಯಲು ಯತ್ನಿಸಿದ. ಕೂಡಲೇ ಆತನ ಕೈಯಿಂದ ಬಿಡಿಸಿಕೊಂಡು ಹೊರಗೆ ಓಡಿ ಬಂದು, ರಕ್ಷಣೆಗಾಗಿ ಪಕ್ಕದ ಮನೆಯ ಮಹಿಳೆಯನ್ನು ಕರೆದೆ. ಆಕೆಯೊಂದಿಗೆ ಮನೆಗೆ ಬಂದು ನೋಡಿದಾಗ ಅತ್ತೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅಡಿಕೆ ಕುಟ್ಟಲು ಬಳಸುವ ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾನೆ ಎಂದು ಪತಿಯ ಮುಂದೆ ಹೇಳಿದ್ದಳು.
ಘಟನೆ ಕುರಿತು ಮಾಹಿತಿ ಆಧರಿಸಿ ದಂಪತಿ ಹಾಗೂ ಸ್ಥಳೀಯ ನಿವಾಸಿಗಳಿಂದ ಹೇಳಿಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಮೂಲಕ ಘಟನಾ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಹತ್ಯೆಗೆ ಬಳಸಿದ್ದ ಕಬ್ಬಿಣದ ರಾಡ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಸೌಂದರ್ಯ ಮೇಲೆ ಶಂಕೆ ವ್ಯಕ್ತವಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.