ಬೆಂಗಳೂರು: ಈ ಎರಡು ವಿಧಾನಸಭೆ ಉಪಚುನಾವಣೆ ಗೆಲುವಿನ ಮೂಲಕ ರಾಜ್ಯಕ್ಕೆ ಹೊಸದೊಂದು ಸಂದೇಶ ನೀಡಲು ಸಜ್ಜಾಗಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿ, ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಎರಡು ಕ್ಷೇತ್ರದಲ್ಲಿ ನಮಗೆ ಗೆಲುವು ಲಭಿಸಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಗೆಲುವಿನ ಮೂಲಕ ರಾಜ್ಯದ ಜನತೆಗೆ ಬಿಜೆಪಿ ಭ್ರಷ್ಟ ಸರ್ಕಾರದ ವಿರುದ್ಧ ಒಂದು ಸ್ಪಷ್ಟ ಸಂದೇಶ ರವಾನೆ ಆಗಲಿದೆ. ಅಲ್ಲದೆ ಬಿಜೆಪಿ ವಿರೋಧಿ ಅಲೆ ರಾಜ್ಯದಲ್ಲಿದೆ ಎಂಬ ಸಂದೇಶವು ತಲುಪಲಿದೆ ಎಂದಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಒಬ್ಬ ಅನುಭವಿ ನಾಯಕರು. ಪಕ್ಷದಲ್ಲಿ ಸಾಕಷ್ಟು ಅನುಭವ ಹೊಂದಿದವರಾಗಿದ್ದಾರೆ. ಕ್ಷೇತ್ರಕ್ಕೆ ಅವರ ಆಯ್ಕೆ ಹೊರತು ಬೇರೆ ಆಯ್ಕೆಗೆ ಅವಕಾಶ ಇರಲಿಲ್ಲ. ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ಬೆಂಬಲದೊಂದಿಗೆ ಅವರು ನಿಂತಿದ್ದಾರೆ. ಕುಸುಮ ಹನುಮಂತರಾಯಪ್ಪ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯಾಗಿದ್ದರು ಕೂಡ ಸಮರ್ಥರಾಗಿದ್ದಾರೆ. ಅನುಭವಿ ಹಾಗೂ ವಿದ್ಯಾವಂತರಾಗಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ಸರ್ವ ಸಮ್ಮತಿಯೊಂದಿಗೆ ಇಬ್ಬರ ನಾಯಕರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಹೊಸದಾಗಿ ನಿಯೋಜಿತರಾಗಿದ್ದರು ಎಂಬ ಕಾರಣಕ್ಕೆ ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿಲ್ಲ. ಎಲ್ಲ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಪ್ರತಿಷ್ಠೆಯಾಗಿ ಪರಿಗಣಿಸುತ್ತದೆ. ಈ ಹಿನ್ನೆಲೆ ಪ್ರತಿಯೊಬ್ಬ ನಾಯಕರು ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.