ಬೆಂಗಳೂರು: ಮಳೆಕೊಯ್ಲು ವ್ಯವಸ್ಥೆಗೆ ಉತ್ತೇಜನ ನೀಡಿದರೆ ಮುಂದಿನ ದಿನಗಳಲ್ಲಿ ಮಹಾನಗರದ ಜನರ ಅಗತ್ಯಕ್ಕೆ ತಕ್ಕಂತೆ ನೀರು ನಗರದಲ್ಲೇ ಲಭಿಸಲಿದೆ ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ತಿಳಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ತಿದ್ದುಪಡಿ ವಿಧೇಯಕ-2021 ಕುರಿತು ಮಾತನಾಡಿ, 30*40 ಅಳತೆಯ ಒಂದು ನಿವೇಶನದಲ್ಲಿ ನೀರು ಸಂಗ್ರಹಿಸುವ ಕಾರ್ಯ ಆದರೆ 1 ಲಕ್ಷ ಲೀಟರ್ ಗೂ. ಅಧಿಕ ಪ್ರಮಾಣದ ನೀರು ಉಳಿಸಬಹುದು. ಆಗ ಬೆಂಗಳೂರು ಜನರಿಗೆ ಕಾವೇರಿ ಅವಲಂಬನೆಯೇ ಬೇಡ. ಸರ್ಕಾರ ಈ ರೀತಿ ನೀರು ಉಳಿಸುವ ಕಾರ್ಯಕ್ಕೆ ಉತ್ತೇಜನ ನೀಡಬೇಕು. ಇದಕ್ಕೆ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸಬೇಕು. ಪ್ರತಿ ವಾರ್ಡ್‌ನಲ್ಲಿ ಇದಕ್ಕೆ ಸಂಬಂಧಿಸಿದ ಉತ್ತೇಜನ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.
ದೆಹಲಿಯಲ್ಲಿ 50 ಸಾವಿರ, ಒಡಿಶಾದಲ್ಲಿ ಸರ್ಕಾರ 40 ಸಾವಿರ ರೂ. ಸಬ್ಸಿಡಿಯನ್ನು ಮಳೆಕೊಯ್ಲಿಗೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕೂಡಲೇ ಇದನ್ನು ಆರಂಭಿಸಬೇಕು. ಜನರಿಗೆ ತಿಳಿಹೇಳುವ ಕಾರ್ಯ ಮಾಡಬೇಕು. ಸರ್ಕಾರದ ಎಲ್ಲಾ ಕಟ್ಟಡವನ್ನೂ ಮಳೆಕೊಯ್ಲು ಸೌಲಭ್ಯಕ್ಕೆ ಒಳಪಡಿಸಬೇಕು. ಕಲ್ಯಾಣ ಮಂಟಪ, ಸರ್ಕಾರಿ ಕಚೇರಿ, ಮೈದಾನದಲ್ಲಿ ಈ ಕಾರ್ಯ ಆಗಬೇಕು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು.
'ಹೊಸದಾಗಿ ಮನೆ ಕಟ್ಟುವವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು'
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಗೋಪಾಲಯ್ಯ, ನಾವು ಮಳೆಕೊಯ್ಲು ಅವಕಾಶಕ್ಕೆ ಅರ್ಜಿ ಕರೆದಿದ್ದೆವು. ಆದರೆ ಒಂದು ಅರ್ಜಿ ಕೂಡ ಬಂದಿಲ್ಲ. ಮನೆ ಕಟ್ಟಿಕೊಂಡವರಿಗೆ ಮಳೆಕೊಯ್ಲು ಮಾಡಿ ಚರಂಡಿಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸುತ್ತೇವೆ ಎಂದರೂ ಸ್ಪಂದನೆ ಸಿಕ್ಕಿಲ್ಲ. ಹೊಸದಾಗಿ ಮನೆ ಕಟ್ಟುವವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ನೀರಿನ ಸಮಸ್ಯೆ ಎದುರಾಗಲಿದೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಒಂದರಲ್ಲೇ 400-500 ಬೋರ್‌ವೆಲ್‌ಗಳು ಬತ್ತಿ ಹೋಗಲಿದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಅಪಾಯ ಎದುರಾಗಲಿದೆ. ಜನಪ್ರತಿನಿಧಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ನಿತ್ಯ ಕುಡಿಯುವ ಬಳಕೆಗೆ 18 ಟಿಎಂಸಿ ನೀರನ್ನು ಬಳಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜನಸಂಖ್ಯೆ 3 ಕೋಟಿಗೆ ಏರುವ ನಿರೀಕ್ಷೆ ಇದೆ. ಆಗ ನೀರಿನ ಬೇಡಿಕೆ ಹೆಚ್ಚಲಿದೆ. ಇದಕ್ಕೆ ವಿಸ್ತಾರವಾದ ಯೋಜನಾ ವಿವರ ಸಿದ್ಧವಾಗಬೇಕಿದೆ. ಅದನ್ನು ಕೇಂದ್ರ ಸರ್ಕಾರ ಹಾಗೂ ಹವಾಮಾನ ಇಲಾಳೆಗೆ ನೀಡಬೇಕಿದೆ. ಈ ಹಿಂದೆ ಹೆಚ್.ಡಿ.ದೇವೇಗೌಡರು ಪ್ರಯತ್ನ ಮಾಡಿದ್ದರು. ಇದುವರೆಗೂ ಫಲ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಇದರತ್ತ ಗಮನ ಹರಿಯಲಿ ಎಂದರು.
'ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ಕೆರೆಯನ್ನು ತೋರಿಸಬೇಕಾಗುತ್ತದೆ'
ಕಾಂಗ್ರೆಸ್ ಪಕ್ಷದ ಸಚೇತಕ ನಾರಾಯಣ ಸ್ವಾಮಿ ಮಾತನಾಡಿ, ಹಿಂದೆ ಕೆಂಪೇಗೌಡರ ದೂರದೃಷ್ಟಿ ಇರಿಸಿಕೊಂಡು ಸಾಕಷ್ಟು ಕೆರೆ ಕಟ್ಟೆ ನಿರ್ಮಿಸಿದ್ದರು. ಆದರೆ ಕಾಲಾನಂತರದಲ್ಲಿ ನಗರ ಬೆಳೆದಿದೆ. ಕೆರೆ ಅವಲಂಬಿಸಿ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಈಗ ಐದು ಹಂತದಲ್ಲಿ ಕಾವೇರಿ ನೀರು ತಂದರೂ ಸಾಲುತ್ತಿಲ್ಲ. ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ಕೆರೆಯನ್ನು ತೋರಿಸಬೇಕಾಗುತ್ತದೆ. ನೂರಾರು ಎಕರೆ ಕೆರೆ ಒತ್ತುವರಿಯಾಗಿದೆ. ಬಿಲ್ಡರ್‌ಗಳು ಬಂದು ಕೆರೆಯನ್ನು ನುಂಗಿದ್ದಾರೆ. ಶೇ.60 ರಿಂದ 70 ರಷ್ಟು ಕೆರೆ ಮಾತ್ರ ಇದೆ. ಇದ್ದ ಕೆರೆಗಳೂ ಕಲುಶಿತಗೊಂಡಿವೆ. ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುವ ಮುನ್ನವೇ ಈ ಬಿಲ್ ತಂದಿರುವುದು ಸಂತೋಷದ ವಿಷಯ ಎಂದರು.