ಬೆಂಗಳೂರು :ಕೊರೊನಾ ವೈರಸ್ ಬಿರುಗಾಳಿ ವ್ಯಾಪಾರ ಉದ್ಯಮಕ್ಕೆ ಹೊಡೆತ ಕೊಟ್ಟಿರೋದು ಅಷ್ಟಿಷ್ಟಲ್ಲ. ಕೋವಿಡ್ನಿಂದ ನೆಲಮಟ್ಟಕ್ಕೆ ಕುಸಿದಿದ್ದ ಸಣ್ಣಪುಟ್ಟ ವ್ಯಾಪಾರಿಗಳು, ಮತ್ತೆ ಮೇಲೇಳಲು ಹರಸಾಹಸ ಪಡ್ತಿದ್ದಾರೆ. ಕೆಲವೆಡೆ ವ್ಯಾಪಾರ-ವಹಿವಾಟು ಕ್ರಮೇಣ ಯಥಾಸ್ಥಿತಿಗೆ ಮರಳುತ್ತಿದೆ. ಆದರೆ, ವ್ಯಾಪಾರಿಗಳು ಮಾತ್ರ ತಮ್ಮ ಅಂಗಡಿಗಳ ವ್ಯಾಪಾರ ಪರವಾನಗಿ ನವೀಕರಣ ಅಥವಾ ಹೊಸ ಪರವಾನಿಗೆಗಾಗಿ ಮುಂದೆ ಬರದಿರುವುದು ಸರ್ಕಾರಕ್ಕೆ ತಲೆನೋವಾಗಿದೆ. ಈ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತಿ ದೊಡ್ಡ ನಷ್ಟ ಉಂಟಾಗಲಿದೆ.
ಲಾಕ್ಡೌನ್ನಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದೆ. ಜೀವನ ನಡೆಸಲೂ ಸಾಧ್ಯವಾಗದ ರೀತಿ ಕೊರೊನಾ ಪೆಟ್ಟು ಕೊಟ್ಟಿದೆ. ವ್ಯಾಪಾರ, ವಹಿವಾಟು ಚೇತರಿಸಿಕೊಳ್ಳದ ಕಾರಣ ಸಾವಿರಾರು ವಾಣಿಜ್ಯ ಮಳಿಗೆಗಳು ಲಾಕ್‍ಔಟ್ ಆಗಿವೆ. ಅತ್ತ ಉದ್ಯೋಗ ಕಳೆದುಕೊಂಡ ಹಲವು ಕಾರ್ಮಿಕರು ಈಗ ಕೆಲಸಕ್ಕಾಗಿ ಅಲೆದಾಡುತ್ತಿದ್ರೆ, ಇತ್ತ ಆರ್ಥಿಕ ಹಿಂಜರಿತಕ್ಕೆ ಒಳಗಾಗಿರುವ ವ್ಯಾಪಾರಿಗಳು ತಮ್ಮ ವ್ಯಾಪಾರ ಪರವಾನಗಿಗಳನ್ನು ನವೀಕರಿಸಲು ಮತ್ತು ಹೊಸ ಪರವಾನಿಗೆಗೋಸ್ಕರ ಅರ್ಜಿ ಸಲ್ಲಿಸುವ ಪ್ರಮಾಣ ಗಣನೀಯವಾಗಿ ಕುಸಿದಿದೆ.
ಹೋಟೆಲ್, ಜವಳಿ, ಆಟೋಮೊಬೈಲ್, ಕಿರಾಣಿ, ಜನರಲ್ ಸ್ಟೋರ್ಸ್, ವಿದ್ಯುತ್ ಉಪಕರಣ, ಸಿಮೆಂಟ್ ಅಂಗಡಿ, ಮೊಬೈಲ್, ಮೊಬೈಲ್ ಬಿಡಿಭಾಗಗಳ ಶಾಪ್,ಪುಸ್ತಕ-ನೋಟ್‍ಬುಕ್ ಮಾರಾಟ ಮಳಿಗೆ, ಜೆರಾಕ್ಸ್ ಅಂಗಡಿ ಸೇರಿ ರಾಜ್ಯದಲ್ಲಿ ಲಕ್ಷಾಂತರ ಅಂಗಡಿಗಳು ಮುಚ್ಚಿವೆ. ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು ಸೇರಿ ರಾಜ್ಯದ ಕೆಲವೆಡೆ ವಿವಿಧ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ವ್ಯಾಪಾರಸ್ಥರು ನಷ್ಟದಲ್ಲಿದ್ದು, ಮತ್ತೆ ವ್ಯಾಪಾರ ನಡೆಸಲು ಆಸಕ್ತಿ ತೋರುತ್ತಿಲ್ಲ.