ಬೆಂಗಳೂರು: ಕಸದ ಸಮಸ್ಯೆ ಪರಿಹರಿಸಲು ಬರ್ನಿಂಗ್ ಸಿಸ್ಟಮ್ ಅಳವಡಿಸಬೇಕು. ಇದರಿಂದ ಗ್ಯಾಸ್ ಹಾಗೂ ಎಲೆಕ್ಟ್ರಿಕಲ್ ಉತ್ಪಾದನೆ ಕೂಡ ಸಾಧ್ಯವಿದೆ. ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿ ಇದು ಶೀಘ್ರವೇ ಜಾರಿಗೆ ಬರಬೇಕು ಎಂದು ಪೌರಾಡಳಿತ ಮತ್ತು ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.
ವಿಕಾಸಸೌಧದಲ್ಲಿ ಇಂದು ಸಂಜೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಸದ ಸಮಸ್ಯೆ ಪರಿಹರಿಸುವ ಸಂಬಂಧ ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದ ಸಚಿವರು, ಹಸಿ ಕಸವನ್ನು ಗೊಬ್ಬರ ಮಾಡಬಹುದು. ಆದರೆ, ಪ್ಲಾಸ್ಟಿಕ್ ಕಸ ಪರಿಸರಕ್ಕೆ ಮಾರಕ. ಅದನ್ನು ತಡೆಗಟ್ಟಲು ಬರ್ನಿಂಗ್ ಸಿಸ್ಟಮ್ ಉತ್ತಮ ಮಾರ್ಗ. ಜರ್ಮನ್ ಟೆಕ್ನಾಲಜಿಯ ವ್ಯವಸ್ಥೆಯಲ್ಲಿ ಬರ್ನಿಂಗ್ ಮಾಡಿದರೆ ಕೆಟ್ಟವಾಸನೆ ಕೂಡ ಹರಡಲ್ಲ. ಜೊತೆಗೆ ವಿದ್ಯುತ್ ಹಾಗೂ ಗ್ಯಾಸ್ ಉತ್ಪಾದನೆಗೂ ಸಹಕಾರಿ. ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರಬಹುದು ಎಂದು ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೇರಳದಿಂದ ಬಂದು ಚಾಮರಾಜನಗರದಲ್ಲಿ ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು. ತಕ್ಷಣ ಅದನ್ನು ತಡೆಗಟ್ಟಬೇಕು. ಹಸಿ ಕಸ ಗೊಬ್ಬರ ಮಾಡುವ ಬಗ್ಗೆಯೂ ಒಂದು ಸ್ಥಳ ನಿಗದಿ ಮಾಡಬೇಕು. ರಾಜ್ಯದ ಎಲ್ಲ ಕಡೆಯಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿ. ಅದಕ್ಕಿಂತ ಮುಂಚಿತವಾಗಿ ಬರ್ನಿಂಗ್ ಸಿಸ್ಟಮ್ ಅಳವಡಿಸುವ ಬಗ್ಗೆ ನೀಲನಕ್ಷೆ ರೂಪಿಸಿ ಎಂದು ಹೇಳಿದರು.