ಬೆಂಗಳೂರು: 2021-22 ನೇ ಸಾಲಿನ ಬಜೆಟ್ ಮಂಡನೆಗೆ ತಯಾರಾಗುತ್ತಿರುವ ಹಣಕಾಸು ಖಾತೆಯನ್ನೂ ಹೊಂದಿರುವ ಬಿ.ಎಸ್. ಯಡಿಯೂರಪ್ಪ ಅವರು, ಬಜೆಟ್‌ಗೆ ಹೇಗೆ ಹಣ ಹೊಂದಿಸಬೇಕೆಂಬುದೇ ಅವರ ಮುಂದೆ ಇರುವ ದೊಡ್ಡ ಸವಾಲಾಗಿದೆ.
ಕೊರೊನಾ ಸಂಕಷ್ಟದಿಂದಾಗಿ ರಾಜ್ಯ ಸರ್ಕಾರದ ಸ್ವಂತ ಆದಾಯ ಗಣನೀಯವಾಗಿ ಕುಗ್ಗಲಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಸಹ ದೊಡ್ಡ ಮಟ್ಟದಲ್ಲಿ ರಾಜ್ಯದ ನೆರವಿಗೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ತನ್ನ ಗಮನವನ್ನು ಸಾಲದ ಮೇಲೆಯೇ ಕೇಂದ್ರೀಕರಿಸುವುದು ಅನಿವಾರ್ಯವಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಮಾಡಿರುವ ಸಾಲದ ಪ್ರಮಾಣ ಸುಮಾರು 4 ಲಕ್ಷ ಕೋಟಿ ರೂ.ಗಳ ಅಂಚಿನಲ್ಲಿದೆ. ಹಾಗಾಗಿ, ಮುಂದಿನ ಬಜೆಟ್ ಗಾತ್ರವನ್ನು ಸರಿದೂಗಿಸುವುದಕ್ಕಾಗಿ ಮಾಡಿದ ಸಾಲದ ಪ್ರಮಾಣ ರಾಜ್ಯದ ಸಾಲದ ಗಾತ್ರ 5 ಲಕ್ಷ ಕೋಟಿ ರೂ.ಗಳ ಹತ್ತಿರಕ್ಕೆ ಹೋಗುವಂತೆ ಮಾಡುತ್ತದೆ.
ರಾಜ್ಯ ಸರ್ಕಾರ ತಾನು ಮಾಡಿರುವ ಸಾಲದ ಮೇಲಿನ ಅಸಲು, ಬಡ್ಡಿ, ಚಕ್ರ ಬಡ್ಡಿಯ ಬಾಬ್ತಿಗೆ ದೊಡ್ಡ ಪ್ರಮಾಣದ ಹಣ ಇಡಬೇಕು. ಹಾಗೆಯೇ ಆಡಳಿತ ಯಂತ್ರ ನಡೆಸಲು ಪೂರಕವಾಗಿ ಸರ್ಕಾರಿ ನೌಕರರಿಗೆ ವೇತನ ನೀಡಬೇಕು. ಇಂತಹ ಬಾಬ್ತುಗಳಿಗೆ ಒದಗಿಸುವ ಹಣದ ಪ್ರಮಾಣ ಹೆಚ್ಚಾದರೆ ಸಹಜವಾಗಿಯೇ ಯೋಜನೇತರ ಬಾಬ್ತಿಗೆ ಹೆಚ್ಚು ಹಣ ಒದಗಿಸಬೇಕಾಗುತ್ತದೆ. ಒಂದು ಬಜೆಟ್‌ನಲ್ಲಿರುವ ಯೋಜನೆ ಮತ್ತು ಯೋಜನೇತರ ಬಾಬ್ತುಗಳ ಪೈಕಿ ಯೋಜನಾ ಬಾಬ್ತು ಗಳಿಗೆ ಹೆಚ್ಚು ಹಣ ನೀಡುವುದು ಆರ್ಥಿಕತೆಗೆ ಒಳ್ಳೆಯದೆ. ಆರ್ಥಿಕ ತಜ್ಞರ ಪ್ರಕಾರ, ಒಂದು ಬಜೆಟ್‌ನಲ್ಲಿ ಯೋಜನೇತರ ಬಾಬ್ತಿ ಗಿಂತಲೂ ಯೋಜನೆಯ ಬಾಬ್ತುಗಳಿಗೆ ಹೆಚ್ಚು ಹಣ ನೀಡುವ ಪರಿಸ್ಥಿತಿಯಿದ್ದರೆ ಅದು ಅತ್ಯುತ್ತಮ ಬಜೆಟ್.
ಆದರೆ ಇವತ್ತಿನ ಸ್ಥಿತಿಯಲ್ಲಿ ಯೋಜನೇತರ ಬಾಬ್ತುಗಳಿಗಿಂತ ಯೋಜನೆಯ ಬಾಬ್ತುಗಳಿಗೆ ಹೆಚ್ಚಿನ ಹಣ ಕೊಡುವುದು ಕಷ್ಟದ ಕೆಲಸ. ಆದರೆ ಬಜೆಟ್ ಗಾತ್ರದ ಪೈಕಿ ಶೇ. 50 ರಷ್ಟನ್ನಾದರೂ ಯೋಜನೆಯ ಬಾಬ್ತಿಗೆ ನೀಡಿದರೆ ಒಳ್ಳೆಯದು. ಆದರೆ ದಿನಕಳೆದಂತೆ ಯೋಜನೆಯ ಬಾಬ್ತಿಗೆ ನೀಡುತ್ತಿರುವ ಹಣಕ್ಕಿಂತ ಹೆಚ್ಚಾಗಿ ಯೋಜನೇತರ ಬಾಬ್ತಿಗೆ ಹೆಚ್ಚು ಹಣ ನೀಡುವುದು ಅನಿವಾರ್ಯವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ನೂತನ ಬಜೆಟ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ತಮಗೆ ಹೆಚ್ಚು ಹಣ ಒದಗಿಸಬೇಕು ಎಂದು ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳು ಮುಖ್ಯಮಂತ್ರಿಗಳ ಮುಂದೆ ಮನವಿ ಸಲ್ಲಿಸಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದೇ ತನಗೆ ಹೆಚ್ಚುವರಿಯಾಗಿ 500 ಕೋಟಿ ರೂ.ಗಿಂತ ಹೆಚ್ಚು ಹಣ ಬೇಕೆಂದು ಕೇಳಿದೆ. ಆದರೆ ಎಲ್ಲ ಇಲಾಖೆಗಳಿಗೆ ಹೆಚ್ಚುವರಿಯಾಗಿ ಹಣ ಒದಗಿಸುವುದಿರಲಿ, ಕಳೆದ ವರ್ಷ ನಿಗದಿ ಮಾಡಿದ ಪ್ರಮಾಣದಷ್ಟು ಹಣ ಒದಗಿಸುವುದು ಕೂಡ ಕಷ್ಟವಾಗಲಿದೆ. 2020-21 ನೇ ಸಾಲಿನ ಬಜೆಟ್‌ನಲ್ಲಿ ಇಲಾಖೆಗಳಿಗೆ ನೀಡಿದ್ದ ಹಣದ ಪೈಕಿ ಶೇ. 20 ರಿಂದ 25 ರಷ್ಟು ಪ್ರಮಾಣದ ಹಣವನ್ನು ಕಡಿತ ಮಾಡಲಾಗಿದೆ. ಅಂದಾಜಿನ ಪ್ರಕಾರ 2020-21 ನೇ ಸಾಲಿನ ಬಜೆಟ್‌ಗೆ ಎಷ್ಟು ಪ್ರಮಾಣದ ಹಣ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತೋ? ಅದರಲ್ಲಿ ಕನಿಷ್ಠ 80 ಸಾವಿರ ಕೋಟಿ ರೂ.ನಷ್ಟು ಹಣ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾವ ಇಲಾಖೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಿಎಂ ನಡೆದುಕೊಳ್ಳುತ್ತಿದ್ದಾರೆ. ಆದರೆ, ಅವರ ಸಂಪುಟ ಸಹೋದ್ಯೋಗಿಗಳಿಗೇ ಇದರ ಬಗ್ಗೆ ಸಮಾಧಾನವಿಲ್ಲ.
ಈ ಮಧ್ಯೆ ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಗುತ್ತಿಗೆದಾರರಿಗೆ ನೀಡಬೇಕಾದ ಹಣವನ್ನು ಇದುವರೆಗೆ ಕೊಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 2020-21 ನೇ ಸಾಲಿನ ಬಜೆಟ್‌ನಲ್ಲಿ ಲಭ್ಯವಾಗುವ ಹಣದಿಂದ ಎಲ್ಲ ಇಲಾಖೆಗಳ ಬೇಡಿಕೆ ಈಡೇರಿಸುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ. ಇಂತಹ ಸ್ಥಿತಿಯಲ್ಲಿ ಜನಸಾಮಾನ್ಯರು ಕಷ್ಟ ಸಾಧ್ಯ. ಸದ್ಯ ಗಗನಕ್ಕೇರುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆಯಿಂದ ಕಂಗಾಲಾಗಿರುವ ಜನರಿಗೆ ರಾಜ್ಯ ಬಜೆಟ್ ಕುತೂಹಲ ಮೂಡಿಸಿದೆ. ಸಿಎಂ ಯಡಿಯೂರಪ್ಪ ಅವರಿಗೆ ದೊಡ್ಡ ಸವಾಲಾಗಿರುವ ಬಜೆಟ್ ಹೇಗೆ ನಿಭಾಯಿಸಲಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
2020-21 ನೇ ಸಾಲಿನ ಬಜೆಟ್ ಅನ್ನು ಅನುಷ್ಠಾನಗೊಳಿಸುವ ವಿಷಯದಲ್ಲಿ ಅವರು ಸಫಲರಾಗಿಲ್ಲ. ಬಜೆಟ್ ಭರವಸೆಗಳ ಪೈಕಿ ಶೇ. 85 ರಷ್ಟನ್ನು ಮಾರ್ಚ್ ಅಂತ್ಯದೊಳಗೆ ಈಡೇರಿಸುತ್ತೇನೆ ಎಂದು ಸಿಎಂ ಹೇಳುತ್ತಿದ್ದರೂ, ಅದು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಕಳೆದ ವರ್ಷ 2.31 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅದನ್ನು ಸರಿದೂಗಿಸಲು 52 ಸಾವಿರ ಕೋಟಿ ರೂ.ಗಳ ಸಾಲ ಪಡೆಯುವುದಾಗಿ ಘೋಷಿಸಿದ್ದರು. ಆದರೆ, ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದಾಯ ಮಾತ್ರವಲ್ಲ, ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಡಿ ಬರಬೇಕಾದ 45 ಸಾವಿರ ಕೋಟಿ ರೂ.ಗಳಷ್ಟು ಹಣ ಖೋತಾ ಆಯಿತು. ಅದು ಜಿ.ಎಸ್.ಟಿ.ಪಾಲು ಇರಬಹುದು, 15 ಹಣಕಾಸು ಆಯೋಗ ನಿಗದಿ ಪಡಿಸಿದ ಹಣವೇ ಇರಬಹುದು, ವಿವಿಧ ಯೋಜನೆಗಳಿಗೆ ದಕ್ಕುವ ಅನುದಾನವೇ ಇರಬಹುದು.
ಒಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಾದ ಸುಮಾರು 45 ಸಾವಿರ ಕೋಟಿ ರೂ.ಗಳಷ್ಟು ಹಣ ರಾಜ್ಯಕ್ಕೆ ಬರಲಿಲ್ಲ. ಹೀಗಾಗಿ ಬಜೆಟ್‌ನಲ್ಲಿ ಹೇಳಿದ ಕಾರ್ಯಕ್ರಮಗಳಿಗೆ ಮತ್ತಿತರ ಯೋಜನೇತರಗಳಿಗೆ ಹಣ ಹೊಂದಿಸಲು ಹೆಚ್ಚುವರಿಯಾಗಿ 36 ಸಾವಿರ ಕೋಟಿ ರೂ.ಗಳಷ್ಟು ಸಾಲ ಪಡೆಯುವುದು ರಾಜ್ಯಕ್ಕೆ ಅನಿವಾರ್ಯವಾಯಿತು. ಈ ಸಾಲ ಬಜೆಟ್ ಗಾತ್ರವನ್ನು ಸರಿದೂಗಿಸುತ್ತದೆ ಎಂಬ ಅರ್ಥ ಅಲ್ಲ. ಬಜೆಟ್ ಮೂಲಕ ಕೆಲವು ಯೋಜನೆಗಳಿಗೆ ಅನಿವಾರ್ಯವಾಗಿ ಒದಗಿಸಬೇಕಾದ ಹಣ ಇದು. ಆದರೆ, ಈ ಪ್ರಮಾಣದ ಸಾಲ ಪಡೆಯಲು ಹಲವು ಪ್ರಮುಖ ಷರತ್ತುಗಳನ್ನು ರಾಜ್ಯ ಸರ್ಕಾರ ಒಪ್ಪಬೇಕಿತ್ತು. ಮೂರು ಷರತ್ತುಗಳಿಗೆ ಒಪ್ಪಿಗೆ ಕೂಡ ನೀಡಿದೆ.
ಈ ಷರತ್ತುಗಳಾದರೂ ಹೇಗಿವೆ ಎಂದರೆ ಮುಂದಿನ ದಿನಗಳಲ್ಲಿ ಅವು ಜನರ ತಲೆಯ ಮೇಲೆ ಹೊಸ ಭಾರಗಳನ್ನು ಹೊರಿಸಲಿವೆ. ಇದರ ಪ್ರಕಾರ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದು ಮತ್ತಿತರ ವಿಷಯಗಳು ಸೇರಿವೆ. ಇತ್ತೀಚೆಗೆ ನಡೆದ ವಿಧಾನಮಂಡಲ ಕಲಾಪದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಪೂರಕವಾಗಿ ಸರ್ಕಾರ ಕಾಯಿದೆ ರೂಪಿಸಿದೆ. ಹಾಗೆಯೇ ಸ್ಥಳೀಯ ಸಂಸ್ಥೆಗಳಿಂದ ಪಡೆಯುವ ಹಲವು ಸೌಲಭ್ಯಗಳಿಗೂ ಹೆಚ್ಚು ಹಣವನ್ನು ಜನ ತೆರಬೇಕಾಗುತ್ತದೆ.
ಈ ಮಧ್ಯೆ ಗಮನಿಸಬೇಕಾದ ಸಂಗತಿ ಎಂದರೆ ಆರ್ಥಿಕ ಸಮೀಕ್ಷೆಯೊಂದು ಪಡಿತರ ಪದ್ಧತಿಯಿಡಿ ಒದಗಿಸುವ ಆಹಾರ ಧಾನ್ಯಗಳ ಬೆಲೆಯನ್ನು ಹೆಚ್ಚಳ ಮಾಡಬೇಕು ಎಂದು ಶಿಫಾರಸು ಮಾಡಿರುವುದು. ಇದು ಕೂಡಾ ಸದ್ಯದ ಜನ ಸಾಮಾನ್ಯರ ಮೇಲೆ ಭಾರವಾಗಲಿದೆ. ನರೇಗಾ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ, ಜಾಬ್ ಕಾರ್ಡ್ಗಳನ್ನು ನೀಡುವುದರ ಮುಖಾಂತರ ರೈತರ ಉತ್ಪನ್ನ ವೆಚ್ಚವನ್ನು ಕಡಿಮೆ ಮಾಡುವುದರ ಮುಖಾಂತರ ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕರಿಸಬೇಕಾಗಿದೆ. ರೈತರ ಉತ್ಪನ್ನಗಳಿಗೆ ಬೆಲೆ ಕುಸಿತವಾದಾಗ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ಅನಿವಾರ್ಯವಾಗಿ ಸಣ್ಣ ರೈತರು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಿ ಆರ್ಥಿಕ ಸಂಕಷ್ಠಕ್ಕೆ ಸಿಲುಕುತ್ತಿದ್ದಾರೆ.
ಹಾಗಾಗಿ, ಬೆಳೆ ರೈತರ ಕೈಗೆ ಬಂದಾಗ ಖರೀದಿ ಕೇಂದ್ರಗಳನ್ನು ತೆರೆದು ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರ ಮುಖಾಂತರ ರೈತರಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ. ರೈತರ ಬೆಳೆಗೆ ಆಕಸ್ಮಿಕ ಬೆಂಕಿ ಬಿದ್ದು, ಬೆಳೆ ನಾಶವಾದಾಗ ರೈತರಿಗೆ ಹಳೆ ಕಾನೂನಿನಡಿಯಲ್ಲಿ ಅತ್ಯಂತ ಕಡಿಮೆ ಪರಿಹಾರ ಮಾತ್ರ ಇದ್ದು ರೈತರಿಗೆ ಗರಿಷ್ಠ ಪರಿಹಾರ ಸಿಗುವಂತೆ ಮಾಡಬೇಕಾಗಿದೆ. ಗಂಗಾ ಕಲ್ಯಾಣದಂತಹ ಲಘು ನೀರಾವರಿ ಯೋಜನೆಗಳನ್ನು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಎಲ್ಲಾ ಜಾತಿಯ ರೈತರಿಗೂ ದೊರಕಿಸಿಕೊಡಬೇಕಾಗಿದೆ. ತರಕಾರಿ ಮತ್ತು ಹಣ್ಣುಗಳನ್ನು ರೈತರು ದಾಸ್ತಾನು ಮಾಡಲು ಸಾಕಷ್ಟು ಶೈತ್ಯಾಗಾರಗಳನ್ನು ನಿರ್ಮಿಸಬೇಕಾಗಿರುವುದು ಸೇರಿದಂತೆ ಹಲವು ವಿಷಯಗಳನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಬೇಕೆಂದು ಹಲವು ಮುಖಂಡರು ಸಿಎಂ ಅವರಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.