ಬೆಂಗಳೂರು:ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ. ಡಿಸೆಂಬರ್ವರೆಗೂ ಕಾಲಾವಕಾಶ ಕೊಡಿ ಎಲ್ಲವೂ ಸರಿ ಹೋಗಲಿದೆ. ಆದರೆ, ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿವಿವಿಧ ಇಲಾಖೆಗಳ ಅನುದಾನ ಬೇಡಿಕೆಗಳ ಚರ್ಚೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ಪರಿಹಾರ ಕಾರ್ಯಕ್ಕೆ ಹೆಚ್ಚು ಹಣ ಬೇಕಾಗಿದೆ. ಶಾಸಕರ ಕ್ಷೇತ್ರಗಳ ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಕೊಡಲು ಹಣಕಾಸಿನ ತೊಂದರೆ ಇದೆ ಎಂದಷ್ಟೇ ಹೇಳಿದೆ. ಮೋಟಾರು ವಾಹನಗಳ ತೆರಿಗೆ ಸಂಗ್ರಹದಲ್ಲೂ ನಿರ್ದಿಷ್ಟ ಗುರಿ ಮುಟ್ಟುತ್ತೇವೆ ಎಂದು ಹೇಳಿದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಆರ್ಥಿಕ ಸಂಪನ್ಮೂಲದ ಗುರಿ ಮುಟ್ಟಲು ಹಾಗೂ ಜಿಡಿಪಿ ಬೆಳವಣಿಗೆಗೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದ ಹಣಕಾಸು ಪರಿಸ್ಥಿತಿ ಚೆನ್ನಾಗಿದೆ. ಆದರೂ ರಾಜ್ಯಾಧ್ಯಕ್ಷ ಸೇರಿದಂತೆ ಕೆಲ ಬಿಜೆಪಿ ನಾಯಕರು ಹಣಕಾಸು ಪರಿಸ್ಥಿತಿ ಸರಿ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಹಾಗೆ ಹೇಳಿಕೆ ನೀಡದಂತೆ ನಿರ್ದೇಶನ ನೀಡಿ. ರಾಜ್ಯದ ತೆರಿಗೆ ಸಂಗ್ರಹದ ಗುರಿ ₹16.98 ಲಕ್ಷ ಕೋಟಿಯಿದ್ದು, ಆ ಗುರಿ ತಲುಪುವುದು ಅನುಮಾನವಿದೆ. ಗುರಿ ತಲುಪದಿದ್ದರೆ ಶೇ.3ರ ವಿತ್ತೀಯ ಕೊರತೆಯ ಮಿತಿಯಲ್ಲಿ ಹೆಚ್ಚಳವಾಗಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿ ದೇಶದಲ್ಲೇ ಉತ್ತಮವಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಕಳೆದ 6 ತಿಂಗಳಲ್ಲಿ ₹ 1672 ಕೋಟಿ ಕಡಿಮೆಯಾಗಿದೆ. ರಾಜ್ಯದಲ್ಲಿ ನೆರೆ, ಬರ ಪರಿಸ್ಥಿತಿ ಇರುವುದರಿಂದ ಕಡಿಮೆ ಮಾಡಬೇಡಿ ಎಂದು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಸಲಹೆ ನೀಡಿದರು. ಕೇಂದ್ರದಿಂದ ಕನಿಷ್ಠ ₹10 ಸಾವಿರ ಕೋಟಿ ನೆರವು ಪಡೆಯಿರಿ. ರಾಜ್ಯ ಸರ್ಕಾರದಿಂದ ₹10 ಸಾವಿರ ಕೋಟಿ ಖರ್ಚು ಮಾಡಿ ಮನೆ ಕಳೆದುಕೊಂಡವರಿಗೆ ಮನೆ, ಬೆಳೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ಅನಗತ್ಯ ವೆಚ್ಚಗಳನ್ನು ಕಡಿತ ಮಾಡಿ. ಆದರೆ, ಅನ್ನಭಾಗ್ಯದಂತಹ ಕಾರ್ಯಕ್ರಮಗಳಿಗೆ ಕೈ ಹಾಕಬೇಡಿ. ಪ್ರತಿ ಪಡಿತರ ಚೀಟಿಗೆ ನೀಡುತ್ತಿರುವ 7 ಕೆಜಿ ಅಕ್ಕಿಯನ್ನು ಮುಂದುವರೆಸಿ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ನಿಲ್ಲಿಸಬೇಡಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.ಇಂದಿರಾ ಕ್ಯಾಂಟೀನ್ ಬಗ್ಗೆ ಗೊಂದಲವಿದೆ. ಬೆಂಗಳೂರಿನಲ್ಲಿ 98, ರಾಜ್ಯದಲ್ಲಿ 200 ಕ್ಯಾಂಟೀನ್ಗಳಿವೆ. ₹ 100 ರಿಂದ 150 ಕೋಟಿ ಖರ್ಚಾಗಬಹುದು. ಹೀಗಾಗಿ ಅದನ್ನು ನಿಲ್ಲಿಸಬೇಡಿ. ಹೊಸ ತಾಲೂಕುಗಳಲ್ಲೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ. ಇನ್ನೂ ಹೆಚ್ಚಿನ ರೀತಿಯಲ್ಲಿ ಒಳ್ಳೆಯ ಆಹಾರ ಕೊಡಿ. ಬಿಬಿಎಂಪಿಯಲ್ಲೂ ಅನುದಾನವಿಲ್ಲ ಎನ್ನುತ್ತಾರೆ. ಬಜೆಟ್ನಲ್ಲೂ ಅನುದಾನವಿಲ್ಲ ಎನ್ನುತ್ತಾರೆ. ಹೀಗಾಗಿ ಗೊಂದಲವಿದೆ. ಇಂದಿರಾ ಕ್ಯಾಂಟೀನ್ ಬಗ್ಗೆ ಜನರಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.