ಬೆಂಗಳೂರು :ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ಕೇಸರಿ ನಾಯಕ. ಹೋರಾಟದಿಂದಲೇ ರಾಜ್ಯದಲ್ಲಿ ಕಮಲ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಬಿಎಸ್‌ವೈ ನಿರೀಕ್ಷೆಯಂತೆ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸಿಎಂ ಯಡಿಯೂರಪ್ಪ 2 ವರ್ಷಗಳ ಅಧಿಕಾರದ ಅವಧಿಯಲ್ಲಿ ಹೆಜ್ಜೆ ಹೆಜ್ಜೆಗೂ ಅಗ್ನಿ ಪರೀಕ್ಷೆ...! 4 ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿರುವ ಯಡಿಯೂರಪ್ಪ, ಒಮ್ಮೆಯೂ ಅವಧಿ ಪೂರ್ಣಗೊಳಿಸಲಾಗಲಿಲ್ಲ. ರಾಜಕೀಯ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಅವರು, 2019ರಲ್ಲಿ 4ನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಧಾರಾಕಾರ ಮಳೆಯಾಗಿ ಬಹುತೇಕ ಕಡೆ ಭೀಕರ ಪ್ರವಾಹ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಬಿಎಸ್‌ವೈ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದರು.
ಕಳೆದ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ 79 ವರ್ಷದ ಯಡಿಯೂರಪ್ಪ ಎಂದೂ ಕೂಡ ಸುಮ್ಮನೆ ಕುಳಿತವರಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದಲ್ಲೆಡೆ ಸುತ್ತಾಡಿ ಪ್ರವಾಹ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದರು. ಪ್ರವಾಹ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದ್ದಂತೆ ವಿಶ್ವವನ್ನು ಕಾಡಿದ ಮಹಾಮಾರಿ ಕೋವಿಡ್ ಹೊಡೆತ ರಾಜ್ಯದ ಮೇಲೂ ಪರಿಣಾಮ ಬೀರಿತು.
ಇದನ್ನೂ ಓದಿ:ರಾತ್ರಿ ಬಂದ ಅದೊಂದು ಫೋನ್ ಕಾಲ್ ಬಿಎಸ್‌ವೈ ಅಳಿದುಳಿದ ಕನಸನ್ನೂ ಕಮರಿಸಿತಾ?
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ದೇಶದ ರಾಜಕಾರಣಕ್ಕೆ ಬರುವಂತೆ ಯಡಿಯೂರಪ್ಪ ಅವರಿಗೆ ಆಹ್ವಾನ ಬಂದಿತ್ತಂತೆ. ಆದ್ರೆ, ರಾಜ್ಯದಲ್ಲಿ ಸಾಕಷ್ಟು ಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ಅವರು, ದೇಶಕಾರಣಕ್ಕೆ ಒಲ್ಲೆ ಎಂದಿದ್ದರಂತೆ. ವಿಧಾನಸಭೆಯಲ್ಲಿ ವಿಪಕ್ಷಗಳನ್ನ ತಮ್ಮ ಮಾತಿನ ಮೂಲಕ ಹಣೆಯುತ್ತಿದ್ದ ಬಿಎಸ್‌ವೈ, ಉತ್ತಮ ವಾಗ್ಮಿಯೂ ಹೌದು. ಬಿಜೆಪಿ ಪಾಳಯದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕಲೆ ಕರಗತ ಮಾಡಿಕೊಂಡಿದ್ದ ಅಗ್ರ ನಾಯಕ ಯಡಿಯೂರಪ್ಪ.
ಇದನ್ನೂ ಓದಿ:ಆಗಿನ ಪ್ರಧಾನಿ ವಾಜಪೇಯಿ ಅವರು ಕೇಂದ್ರದಲ್ಲಿ ಸಚಿವರಾಗಿ ಅಂದಾಗ ಬೇಡ ಎಂದಿದ್ದೆ: ಬಿಎಸ್‌ವೈ
ಸದ್ಯ ಬಿಜೆಪಿಯಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಧಿಕಾರ ಇಲ್ಲ ಎಂಬ ನಿಯಮ ಹಿನ್ನೆಲೆ 79 ವರ್ಷದ ಯಡಿಯೂರಪ್ಪ ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ರಾಜ್ಯದ ಮುಂದಿನ ಸಿಎಂ ಯಾರಾಗ್ತಾರೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.