ಕರ್ನಾಟಕ

karnataka

ETV Bharat / city

ರಾಜ್ಯ ರಾಜಕಾರಣದಲ್ಲಿ ಆಗಾಗ 'ಸಿಡಿ'ಮದ್ದು: ಕೆಲವರ ರಾಜಕೀಯ ಭವಿಷ್ಯಕ್ಕೆ ಎಳ್ಳುನೀರು!

ಸಿಡಿ ವಿಚಾರ ಹಿಂದೆಯೂ ಸಾಕಷ್ಟು ಸಾರಿ ಕೇಳಿಬಂದಿದ್ದು, ಕೆಲವೊಮ್ಮೆ ದೊಡ್ಡಮಟ್ಟದ ಸುದ್ದಿಯಾಗಿ ರಾಜಕೀಯ ನಾಯಕರ ಭವಿಷ್ಯಕ್ಕೆ ಕುತ್ತುಂಟು ಮಾಡಿದರೆ, ಮತ್ತೆ ಕೆಲ ಸಂದರ್ಭ ಹಾಗೆ ಬಂದು ಹೀಗೆ ತೆರಳಿದೆ.

BS Yediyurappa Govt Shaken By CD Affair
ರಾಜ್ಯ ರಾಜಕಾರಣದಲ್ಲಿ ಆಗಾಗ 'ಸಿಡಿ'ಮದ್ದು

By

Published : Jan 16, 2021, 6:19 PM IST

ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ 'ಸಿಡಿ' ಶಬ್ದ ಆಗಾದ ದೊಡ್ಡ ಬಿರುಗಾಳಿಯಂತೆ ಹಬ್ಬುತ್ತಿದೆ. ಇದೀಗ ಈ ಶಬ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುತ್ತಲೇ ಗಿರಕಿ ಹೊಡೆಯುವ ಮೂಲಕ ಹೊಸದೊಂದು ಸಂಚಲನ ಮೂಡಿಸಿದೆ.

ರಾಜಕಾರಣದಲ್ಲಿ ಹಾಲಿ ಮುಖ್ಯಮಂತ್ರಿ ಎದುರಿಸುತ್ತಿರುವ ದೊಡ್ಡ ಆರೋಪ ಇದಾಗಿದ್ದು, ಆಗಾಗ ಕೇಳಿಬರುವ ಈ ಆರೋಪ ಇದೀಗ ಬಿ.ಎಸ್.ಯಡಿಯೂರಪ್ಪ ಹೆಸರಿನೊಂದಿಗೆ ತಳುಕು ಹಾಕಿಕೊಳ್ಳುವ ಮೂಲಕ ದೊಡ್ಡ ಸುದ್ದಿಯಾಗಿದೆ. ಈ ರೀತಿ ಸಿಡಿ ವಿಚಾರ ಹಿಂದೆಯೂ ಸಾಕಷ್ಟು ಸಾರಿ ಕೇಳಿಬಂದಿದೆ. ಇದು ಕೆಲ ರಾಜಕೀಯ ನಾಯಕರ ಭವಿಷ್ಯವನ್ನೇ ಮುಗಿಸಿದ್ದರೆ, ಮತ್ತೆ ಕೆಲವರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿತ್ತು.

ದಿಢೀರ್ ಆಗಿ ತಮ್ಮ ವಿರುದ್ಧ ಕೇಳಿಬಂದ ಆರೋಪದಿಂದ ರಾಜಕೀಯ ನಾಯಕರು ಚೇತರಿಸಿಕೊಂಡಿದ್ದು, ಬಹಳ ಅಪರೂಪ. ಕೆಲ ನಾಯಕರು ರಾಜಕೀಯದಲ್ಲಿ ಮರಳಿ ನೆಲೆ ಕಂಡುಕೊಳ್ಳಲು ವರ್ಷಗಳೇ ಕಳೆದ ಉದಾಹರಣೆ ಇದೆ. ಒಟ್ಟಾರೆ ಸಿಡಿ ಎನ್ನುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದಗಳನ್ನು ಸೃಷ್ಟಿಸಿದೆ. ಆಯಾ ಸಂದರ್ಭಕ್ಕೆ ರಾಜಕೀಯ ಕ್ಷೇತ್ರದಲ್ಲಿ ಬಹುಚರ್ಚಿತ ಸಂಗತಿಯಾಗಿದೆ.

ಇದೀಗ ಯಡಿಯೂರಪ್ಪ ಸುತ್ತಲೇ ಸಿಡಿ ವಿಚಾರ ತಳುಕು ಹಾಕಿಕೊಂಡಿದ್ದು, ಪಕ್ಷದ ಹಿರಿಯ ನಾಯಕ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ನೇರವಾಗಿ ಆರೋಪಿಸಿದ್ದು, ಇದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ ಎಂಬ ಸಿಡಿ ಪ್ರತಿ ಆಡಳಿತ ಪಕ್ಷದ ನಾಯಕರ ಹಾಗೂ ಪ್ರತಿಪಕ್ಷದ ಮುಖಂಡರ ಬಳಿ ಇದೆ ಎಂಬ ಮಾತು ಕೇಳಿಬರುತ್ತಿದೆ. ಇದೇ ಸಿಡಿ ಬಳಸಿ ಇಬ್ಬರು ಸಚಿವ ಸ್ಥಾನ ಗಿಟ್ಟಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಬಹಳ ದೊಡ್ಡ ಇತಿಹಾಸ:ಸಿಡಿ ವಿಚಾರ ಇಂದು ನಿನ್ನೆಯದಲ್ಲ. 2006ರಿಂದಲೂ ಬಳಕೆಯಾಗುತ್ತಿದೆ. ವಿರೋಧಿಗಳು ಸಿಡಿಎಂಎ ತಮ್ಮ ಎದುರಾಳಿಗಳ ವಿರುದ್ಧ ಪ್ರಯೋಗಿಸುವ ದೊಡ್ಡ ಅಸ್ತ್ರವಾಗಿ ಬಳಸಿಕೊಂಡು ಬಂದಿದ್ದಾರೆ. 2006ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಅಕ್ರಮ ವಿಡಿಯೋ ಬಿಡುಗಡೆ ಮಾಡಿದ್ದರು.

ಮಾಜಿ ಸಚಿವ ಚನ್ನಿಗಪ್ಪ ಗಣಿ ಸಚಿವರಾಗಿದ್ದ ಸಂದರ್ಭ ಗಣಿ ಉದ್ಯಮಿಗಳಿಂದ ₹150 ಕೋಟಿ ಕಪ್ಪ ತರಿಸಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ನೀಡಿದ್ದಾರೆ ಎಂಬ ಆರೋಪದ ಸಿಡಿ ಬಿಡುಗಡೆ ಮಾಡಿದ್ದರು. ನಂತರದ ಕೆಲ ತಿಂಗಳು ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಒಂದು ಚೆನ್ನಿಗಪ್ಪ ಉದ್ಯಮಿಗಳ ಜೊತೆ ಕುಳಿತಿರುವ ಫೋಟೋ ಬಿಡುಗಡೆ ಮಾಡಲಾಗಿತ್ತು. ಇದು ಇಂದಿಗೂ ಕುಮಾರಸ್ವಾಮಿ ಹಾಗೂ ಜನಾರ್ದನರೆಡ್ಡಿ ನಡುವಿನ ದೊಡ್ಡ ಬಿರುಕನ್ನು ಹಾಗೆ ಉಳಿಯುವಂತೆ ಮಾಡಿದೆ.

ಶಾಸಕ ಸ್ಥಾನ ಕಿತ್ತುಕೊಂಡ ಸಿಡಿ:2013ರ ವಿಧಾನಸಭೆ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ವಿರುದ್ಧದ ಅಶ್ಲೀಲ ಸಿಡಿ ಬಿಡುಗಡೆಯಾಯಿತು. ಇದು ರಘುಪತಿ ಭಟ್ ಅವರ ಐದು ವರ್ಷದ ರಾಜಕೀಯ ಬದುಕನ್ನು ನುಂಗಿ ಹಾಕಿತ್ತು. 2013ರ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಅವರು 2018ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯ ಮರುಜೀವ ಪಡೆದಿದ್ದಾರೆ.

ಬಿಎಸ್​​​ವೈ ವಿರುದ್ಧ ಸಿಡಿ:2016ರಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆಜೆಪಿ ಪಕ್ಷದ ಮುಖಂಡರಾದ ಪದ್ಮನಾಭ ಪ್ರಸನ್ನ ಆರೋಪಿಸಿ, ಬಿಎಸ್​​​​​​ವೈ ಅವರು ಶೋಭಾ ಕರಂದ್ಲಾಜೆ ಜೊತೆ ವಿವಾಹವಾಗಿದೆ ಎಂದು ಬಾಂಬ್ ಸಿಡಿಸಿದ್ದರು. 2018ರಲ್ಲಿ ಈಶ್ವರಪ್ಪ ಆಪ್ತ ಸಹಾಯಕ ವಿನಯ್​ ಅವರನ್ನು ಯಡಿಯೂರಪ್ಪ ಆಪ್ತ ಸಹಾಯಕ ಎಂ.ಆರ್.ಸಂತೋಷ್ ಅಪಹರಣ ಮಾಡಿದ್ದಾರೆ. ಈ ಸಂಬಂಧ ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಬಳಿ ಇರುವ ಮಾಹಿತಿಯನ್ನು ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಪಡೆದುಕೊಂಡಿದ್ದರು. ಸಿಡಿ ವಿಚಾರಕ್ಕಾಗಿ ಅಪಹರಣ ನಡೆದಿದೆ ಎಂದು ಸಹ ಆರೋಪಿಸಿದ್ದರು.

2019ರಲ್ಲಿ ಆಪರೇಷನ್ ಕಮಲಕ್ಕೆ ಮುಂದಾದ ಬಿ.ಎಸ್.ಯಡಿಯೂರಪ್ಪ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣಗೌಡಗೆ ಆಮೀಷವೊಡ್ಡಿದ ಎರಡು ಕ್ಲಿಪ್ ಬಿಡುಗಡೆಯಾಗಿತ್ತು. ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ಮೇರೆಗೆ ಶರಣಗೌಡ ಅವರೇ ₹25 ಕೋಟಿ ನೀಡುವ ಆಮೀಷದ ಆಡಿಯೋ ಬಿಡುಗಡೆ ಮಾಡಿದ್ದರು.

ಇದೇ ವರ್ಷ ಶಾಸಕ ಅರವಿಂದ ಲಿಂಬಾವಳಿ ವಿರುದ್ಧವೂ ದೊಡ್ಡ ಆರೋಪ ಕೇಳಿಬಂದಿತ್ತು ಮಹದೇವಪುರ ಶಾಸಕರಾಗಿರುವ ಹಾಲಿ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಕೂಡ ಒಂದು ಅಶ್ಲೀಲ ಸಿಡಿ ಬಿಡುಗಡೆಯಾಗಿತ್ತು. ಈ ಸಿಡಿ ಒಂದು ಹಂತಕ್ಕೆ ದೊಡ್ಡ ಸುದ್ದಿ ಮಾಡಿ, ಒಂದಿಷ್ಟು ತಿಂಗಳು ಸಚಿವ ಸ್ಥಾನ ಪಡೆಯದಂತೆ ಮಾಡಿತ್ತು. ಅರವಿಂದ ಲಿಂಬಾವಳಿ ರಾಜಕೀಯ ಬದುಕಿಗೆ ಇದು ದೊಡ್ಡ ಹಾನಿ ಉಂಟು ಮಾಡದಿದ್ದರೂ ಸಾಕಷ್ಟು ದೊಡ್ಡ ಮುಜುಗರ ತಂದಿತ್ತು.

ಮೇಟಿ ರಾಜಕೀಯ ಭವಿಷ್ಯ ಅಂತ್ಯ:ಕಾಂಗ್ರೆಸ್​​​ನ ಮಾಜಿ ಸಚಿವ ಎಚ್​​ ವೈ ಮೇಟಿ ಅವರ ಭವಿಷ್ಯವನ್ನು ಸಿಡಿ ನುಂಗಿಹಾಕಿದೆ. 2016ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಸಿಡಿಯಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾಜಿ ಸಚಿವರಿದ್ದ ದೃಶ್ಯ ದೊಡ್ಡ ಸಂಚಲನ ಮೂಡಿಸಿತ್ತು. ಇದರಿಂದಾಗಿ ಸಚಿವ ಸ್ಥಾನ ಕಳೆದುಕೊಂಡ ಮೇಟಿ 2018ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಸೋಲುಂಡರು. ಇದೊಂದು ಸಿಡಿ ಬಹುತೇಕ ಇವರ ರಾಜಕೀಯ ಬದುಕನ್ನು ಅಂತ್ಯಗೊಳಿಸಿದೆ.

ರಾಮದಾಸ್ ಬಿಕ್ಕಟ್ಟು:2014ರಲ್ಲಿ ಮೈಸೂರು ಭಾಗದ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಎಸ್.ಎ.ರಾಮದಾಸ್ ಹಾಗೂ ಪ್ರೇಮಕುಮಾರಿ ಎಂಬವರ ನಡುವೆ ನಡೆದ ಸಂಭಾಷಣೆಯ ಸಿಡಿ ಬಿಡುಗಡೆಯಾಗಿತ್ತು. ಈ ಪ್ರಕರಣ ಸಾಕಷ್ಟು ದೊಡ್ಡಮಟ್ಟದಲ್ಲಿ ಸುದ್ದಿಯಾಗಿ ರಾಮದಾಸ್ ರಾಜಕೀಯ ಬದುಕನ್ನು ಮುಗಿಸಬಹುದು ಎಂದು ಹಲವರು ನಿರೀಕ್ಷಿಸಿದ್ದರು. ಆದರೆ, ಈ ವಿಚಾರ ನಿರೀಕ್ಷಿತ ಮಟ್ಟದಲ್ಲಿ ರಾಮದಾಸ್​​ ರಾಜಕೀಯಕ್ಕೆ ಮುಳುವಾಗಿ ಕಾಡಲಿಲ್ಲ.

ಗದಗ ಜಿಲ್ಲೆ ರೋಣ ಶಾಸಕ ಕಳಕಪ್ಪ ಬಂಡಿ ತಮ್ಮ ಹಾಗೂ ಇನ್ನೂ ನಾಲ್ವರು ಶಾಸಕರ ವಿರುದ್ಧ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ಸಂದರ್ಭ ಕೂಡ ಶಾಸಕರು ಭಾಗಿಯಾಗಿದ್ದಾರೆ ಎನ್ನಲಾದ ಒಂದು ಸಿಡಿ ಬಿಡುಗಡೆಯಾಗಿತ್ತು. 2019ರಲ್ಲಿ ಬಿಡುಗಡೆಯಾಗಿದ್ದ ಈ ಸಿಡಿ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿ ಭಾಗಿಯಾದವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ರಾಜಕಾರಣದಲ್ಲಿ ಸಿಡಿ ಸುದ್ದಿಯಾಗುತ್ತಿದ್ದು, ಕೆಲವೊಮ್ಮೆ ದೊಡ್ಡಮಟ್ಟದ ಸುದ್ದಿಯಾಗಿ ರಾಜಕೀಯ ನಾಯಕರ ಭವಿಷ್ಯಕ್ಕೆ ಕುತ್ತುಂಟು ಮಾಡಿದರೆ, ಮತ್ತೆ ಕೆಲ ಸಂದರ್ಭ ಹಾಗೆ ಬಂದು ಹೀಗೆ ತೆರಳಿದೆ.

ABOUT THE AUTHOR

...view details