ಕರ್ನಾಟಕ

karnataka

ಕಷ್ಟ ಕಾಲದಲ್ಲಿ ಸಿಗದ ಅತ್ಯಾಪ್ತರ ಸಾಮೀಪ್ಯ: BSY ಮೌನಕ್ಕೆ ಏನೆಲ್ಲಾ ಕಾರಣ ಗೊತ್ತಾ?

ರಾಜೀನಾಮೆ ಕಾಲ ಹತ್ತಿರದಲ್ಲಿದರೂ ಆಪ್ತರ ಬಳಿಯೂ ಯಡಿಯೂರಪ್ಪ ರಾಜಕೀಯ ನಿರ್ಧಾರಗಳ ಕುರಿತು ಸ್ಪಷ್ಟವಾಗಿ ಏನನ್ನೂ ಮಾತನಾಡುತ್ತಿಲ್ಲ. ಅತ್ಯಾಪ್ತರು ಹತ್ತಿರದಲ್ಲಿರುವುದು ಯಡಿಯೂರಪ್ಪ ಅವರನ್ನು ಮೌನವಾಗಿಸಿಬಿಟ್ಟಿದೆ. ಗಟ್ಟಿ ನಿರ್ಧಾರಕ್ಕೆ ಮುಂದಾಗದೆ ಅಸಮಾಧಾನ ವ್ಯಕ್ತಪಡಿಸದೆ ತೊಳಲಾಡುವಂತೆ ಮಾಡಿದೆ ಎನ್ನಲಾಗುತ್ತಿದೆ.

By

Published : Jul 24, 2021, 3:18 AM IST

Published : Jul 24, 2021, 3:18 AM IST

cm resign
cm resign

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಕಷ್ಟದ ಸನ್ನಿವೇಶದಲ್ಲಿ ಅತ್ಯಾಪ್ತರು ಈಗ ಯಡಿಯೂರಪ್ಪ ಅವರ ಸಾಮೀಪ್ಯದಲ್ಲಿ ಇಲ್ಲ. ಹಿಂದೆ ಗಟ್ಟಿ ನಿರ್ಧಾರ ಕೈಗೊಂಡ ವೇಳೆ ಸಿಕ್ಕ ಬೆಂಬಲ ಈಗ ಕಾಣದಿರುವುದು ಯಡಿಯೂರಪ್ಪ ಮೌನಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿ ಮಾತನಾಡಲೂ ಆಗದೆ, ಮೌನವಾಗಿ ಇರಲೂ ಆಗದೆ ಚಡಪಡಿಸುತ್ತಾ ಕೂರುವಂತಾಗಿದೆ.

ಹೌದು, 2011 ರ ಜುಲೈ 31 ರಂದು ಹೈಕಮಾಂಡ್ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ್ದರು. ರೇಸ್ ಕೋರ್ಸ್ ನಿವಾಸದಿಂದ ಸಂಪುಟ ಸಹೋದ್ಯೋಗಿಗಳು ಮತ್ತು ಶಾಸಕರ ತಂಡದೊಂದಿಗೆ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಅಂದು ನೇರವಾಗಿ ಯಡಿಯೂರಪ್ಪ ಬೆಂಬಲಕ್ಕಿದ್ದ ಆಪ್ತರು ಇಂದು ಜೊತೆಗಿದ್ದರೂ ಹಿಂದಿನ ರೀತಿಯಲ್ಲಿ ಗಟ್ಟಿಯಾಗಿ ನಿಲ್ಲುತ್ತಿಲ್ಲ, ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುತ್ತಿದ್ದಾರೆ.

ಇನ್ನು ಅಂದು ಯಡಿಯೂರಪ್ಪ ರಾಜಕೀಯ ಜೀವನದಲ್ಲಿ ಮಹತ್ವದ ಬದಲಾವಣೆ ನಿರ್ಧಾರ ಪ್ರಕಟಿಸಿದ್ದರು. ಆಪ್ತ ಸಚಿವರು, ಬೆಂಬಲಿಗ‌ ಶಾಸಕರು ತಮ್ಮೊಂದಿಗೆ ಬರುತ್ತಾರೆ ಎನ್ನುವ ನಂಬಿಕೆಯಿಂದ ಪ್ರಾದೇಶಿಕ ಪಕ್ಷ ಕಟ್ಟಿದ್ದರು. ಆದರೆ ಅಂದು ಯಡಿಯೂರಪ್ಪ ಹೆಜ್ಜೆಗೆ ಹೆಜ್ಜೆ ಹಾಕಿದ್ದು ಕೇವಲ ಧನಂಜಯ ಕುಮಾರ್, ಎಂ.ಡಿ.ಲಕ್ಷ್ಮೀನಾರಾಯಣ, ಸಿ.ಎಂ ಉದಾಸಿ, ಶೋಭಾ ಕರಂದ್ಲಾಜೆ ಮಾತ್ರ. ನಂತರ ರೇಣುಕಾಚಾರ್ಯ, ಬಿ.ಪಿ.ಹರೀಶ್ ಸೇರಿ ಕೆಲವೇ ಕೆಲವು ಶಾಸಕರು ಬಿಎಸ್​ವೈ ಬೆನ್ನಿಗೆ ನಿಂತಿದ್ದರು.

ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಲು ನಿರ್ಧರಿಸುತ್ತಿದ್ದಂತೆ ಆಪ್ತ ಧನಂಜಯಕುಮಾರ್ ಅವರನ್ನು ಕೆಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ನಂತರ ಹಾವೇರಿಯಲ್ಲಿ ಬೃಹತ್ ಸಮಾವೇಶ ಮಾಡಿ ಕೆಜೆಪಿ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದರು. ಅಂದು ಸಚಿವ ಸ್ಥಾನ ತೊರೆದು ಯಡಿಯೂರಪ್ಪ ಹಿಂದೆ ಬಂದಿದ್ದು ಹಿರಿಯ ನಾಯಕ ಸಿ.ಎಂ.ಉದಾಸಿ ಮತ್ತು ಶೋಭಾ ಕರಂದ್ಲಾಜೆ ಮಾತ್ರ. ಇನ್ನುಳಿದ ಸಚಿವರು ಬಿಎಸ್​ವೈ ಜೊತೆ ಬರಲು ನಿರಾಕರಿಸಿ ಬಿಜೆಪಿಯಲ್ಲೇ ಉಳಿದುಕೊಂಡರು. ಆದರೆ ಎಂ.ಡಿ ಲಕ್ಷ್ಮೀನಾರಾಯಣ ಮಾತ್ರ ಯಡಿಯೂರಪ್ಪ ಬೆಂಬಲಕ್ಕೆ ನಿಂತರು.

(ಅವಧಿ ಮುಗಿಸದೆ ವಿದಾಯ ಹೇಳಲು ಮುಂದಾದ ಸಿಎಂ.. ರಾಜೀನಾಮೆಗೆ ಕಾರಣವಾಗಿದ್ದೇ ಈ ಮೂರು ಅಂಶಗಳು..)


ಕೆಜೆಪಿ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಧನಂಜಯ ಕುಮಾರ್, ಲಕ್ಷ್ಮೀನಾರಾಯಣ ನೋಡಿಕೊಂಡರೆ ರಾಜಕೀಯ ತಂತ್ರಗಾರಿಕೆಯನ್ನು ಸಿಎಂ ಉದಾಸಿ, ಶೋಭಾ ಕರಂದ್ಲಾಜೆ ನೋಡಿಕೊಂಡರು. ಈ ನಾಲ್ವರು ನಾಯಕರೇ ಯಡಿಯೂರಪ್ಪ ಹೆಗಲಿಗೆ ಹೆಗಲು ಕೊಟ್ಟು ಕೆಜೆಪಿಯನ್ನು ಚುನಾವಣೆಗೆ ಸಜ್ಜುಗೊಳಿಸಿದರು. ಸಮಾವೇಶಗಳ ಆಯೋಜನೆ, ಚುನಾವಣಾ ಪ್ರಚಾರ ಕಾರ್ಯ ನೋಡಿಕೊಂಡರು. ಇದೆಲ್ಲದರ ಪರಿಣಾಮ ಕೇವಲ 6 ಸ್ಥಾನ ಗೆದ್ದರೂ ಶೇ.9 ರಷ್ಟು ಮತಗಳನ್ನು ಸೆಳೆದು ಬಿಜೆಪಿಯನ್ನು ಸೋತು ಸುಣ್ಣವಾಗುವಂತೆ ಮಾಡಿತು.

ಆದರೆ ಇಂದಿನ ಸ್ಥಿತಿ ಬೇರೆಯದ್ದೇ ಇದೆ. ಅಂದು ಜೊತೆಗಿದ್ದು ಕಡೆ ಕ್ಷಣದಲ್ಲಿ ಕೆಜೆಪಿಗೆ ಹೋಗದ ಎಲ್ಲರೂ ಇಂದು ಬಿಜೆಪಿಯಲ್ಲಿಯೇ ಇದ್ದಾರೆ. ಯಡಿಯೂರಪ್ಪ ಆಪ್ತ ಬಣ ಎಂದೇ ಗುರುತಿಸಿಕೊಂಡಿದೆ. ಆದರೆ ಹಿಂದೆ ಸಿಕ್ಕ ಅತ್ಯಾಪ್ತರ ಬೆಂಬಲ ಈಗ ಯಡಿಯೂರಪ್ಪಗೆ ಇಲ್ಲವಾಗಿದೆ. ಧನಂಜಯ ಕುಮಾರ್, ಸಿಎಂ ಉದಾಸಿ ನಿಧನರಾಗಿದ್ದಾರೆ. ಲಕ್ಷ್ಮೀನಾರಾಯಣ ಕಾಂಗ್ರೆಸ್ ಸೇರಿದ್ದಾರೆ. ಶೋಭಾ ಕರಂದ್ಲಾಜೆ ಎರಡನೇ ಬಾರಿ ಸಂಸದೆಯಾದ ನಂತರ ಯಡಿಯೂರಪ್ಪ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೆ ಈಗ ಕೇಂದ್ರದಲ್ಲಿ ಸಚಿವರೂ ಆಗಿದ್ದಾರೆ. ಹಾಗಾಗಿ ಅತ್ಯಾಪ್ತ ಬಳಗ ಯಡಿಯೂರಪ್ಪ ಜೊತೆಯಲ್ಲಿ ಇಲ್ಲದಂತಾಗಿದೆ.

ಇಂದು ರಾಜೀನಾಮೆ ಕಾಲ ಸನ್ನಿಹಿತವಾದರೂ ಆಪ್ತರ ಬಳಿಯೂ ಯಡಿಯೂರಪ್ಪ ರಾಜಕೀಯ ನಿರ್ಧಾರಗಳ ಕುರಿತು ಸ್ಪಷ್ಟವಾಗಿ ಏನನ್ನೂ ಮಾತನಾಡುತ್ತಿಲ್ಲ. ಅತ್ಯಾಪ್ತರು ಹತ್ತಿರದಲ್ಲಿರುವುದು ಯಡಿಯೂರಪ್ಪ ಅವರನ್ನು ಮೌನವಾಗಿಸಿಬಿಟ್ಟಿದೆ. ಗಟ್ಟಿ ನಿರ್ಧಾರಕ್ಕೆ ಮುಂದಾಗದೆ ಅಸಮಾಧಾನ ವ್ಯಕ್ತಪಡಿಸದೆ ತೊಳಲಾಡುವಂತೆ ಮಾಡಿದೆ ಎನ್ನಲಾಗುತ್ತಿದೆ.

(2 ವರ್ಷದ ಏಳು ಬೀಳು: ಬಿಎಸ್​ವೈ ಆಡಳಿತಾವಧಿಯಲ್ಲಿ ಎದುರಿಸಿದ್ದು ಸಾಲು - ಸಾಲು ಸವಾಲು, ನೂರೆಂಟು ವಿಘ್ನ!)

ABOUT THE AUTHOR

...view details