ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಲು ನಮ್ಮ ಸರ್ಕಾರ ಸಕಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವೈರಸ್ ರೂಪಾಂತರ ಹಾಗೂ ಹೊಸ ವರ್ಷಾಚರಣೆ ಇರುವ ಕಾರಣಕ್ಕೆ ಇಂದು ಮಧ್ಯಾಹ್ನದಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಜನರು ಇದಕ್ಕೆ ಸಹಕರಿಸಬೇಕು. ಕೋವಿಡ್ ಕಾರ್ಯಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ಬಿಜೆಪಿ, ರಾಜ್ಯ ಹಾಗೂ ರಾಷ್ಟ್ರದಲ್ಲಿ ದಿನೇ ದಿನೇ ತನ್ನ ಸಾಧನೆ ಉತ್ತಮಗೊಳಿಸುತ್ತಾ ಮುನ್ನಡೆಯುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೆ. 60 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸಾಮೂಹಿಕ ನಾಯಕತ್ವ, ನಾಯಕರು, ಕಾರ್ಯಕರ್ತರ ಪರಿಶ್ರಮದಿಂದ ಗೆಲುವಿನ ಸಾಧನೆ ಮಾಡಿದ್ದೇವೆ. 5,728 ಗ್ರಾಮ ಪಂಚಾಯತ್ನಲ್ಲಿ 3,800 ಗ್ರಾ.ಪಂಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು, ಇದು ದೊಡ್ಡ ಸಾಧನೆ ಎಂದರು.
ಮೋದಿ ನೇತೃತ್ವದಲ್ಲಿ ಎನ್ಡಿಎ ಸರ್ಕಾರ 2022 ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ. ರೈತರ ಶ್ರೇಯೋಭಿವೃದ್ಧಿಗಾಗಿ ಕೃಷಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದು, ರೈತರು ತಮ್ಮ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದಾರೆ. ಹಾಗಾಗಿ ಆತಂಕ ಪಡಬೇಕಿಲ್ಲ, ಅಮೆರಿಕ, ಚೀನಾದಂತಹ ಮುಂದುವರೆದ ದೇಶಗಳ ಜೊತೆ ಸ್ಪರ್ಧಿಸಿ ಆರ್ಥಿಕ ಅಭಿವೃದ್ಧಿಯಲ್ಲಿ ಉನ್ನತ ಸ್ಥಾನ ಪಡೆಯಲು ಸಹಕಾರಿಯಾಗಿರುವ ಕಾಯ್ದೆಗಳ ಸುಧಾರಣೆ ಅಗತ್ಯ. ಹಾಗಾಗಿ ಮೋದಿ ಸುಧಾರಿತ ಕಾನೂನು ರೂಪಿಸಿ ಜಾರಿಗೊಳಿಸುತ್ತಿದ್ದಾರೆ. ಆದರೆ ವಿರೋಧ ಪಕ್ಷದ ಕೆಲ ನಾಯಕರು ಅನಗತ್ಯ ಟೀಕೆ ಮಾಡಿ ರೈತರ ಹಾದಿ ತಪ್ಪಿಸುವ, ಪ್ರಗತಿಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು ಮೋದಿಯನ್ನು ಟೀಕೆ ಮಾಡಬಹುದೇ ಹೊರತು ರೈತರು ಸೇರಿ ಸರ್ವರ ಶ್ರೇಯೋಭಿವೃದ್ದಿಗಾಗಿ ರೂಪಿಸಿರುವ ಕಾರ್ಯಕ್ರಮ ಟೀಕಿಸಲು ಸಾಧ್ಯವಿಲ್ಲ. ಹಾಗಾಗಿ ಧರಣಿ ನಿಲ್ಲಿಸಿ ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದೆ ಬರುವಂತೆ ರೈತರಿಗೆ ಮನವಿ ಮಾಡಿದರು.
ಮೋದಿ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ದೇಶಾದ್ಯಂತ ನಡೆದ ಎಲ್ಲಾ ಚುನಾವಣೆ, ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿರುವುದಕ್ಕೆ ಮೋದಿಯ ಸ್ಪೂರ್ತಿದಾಯಕ ನಾಯಕತ್ವ ಕಾರಣ. ರಾಜ್ಯದಲ್ಲಿ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ 15 ಕ್ಕೆ 12 ಸ್ಥಾನದಲ್ಲಿ ಜಯಗಳಿಸಿದ್ದು, 2020 ರಲ್ಲಿ ಎರಡು ಉಪ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸಿದ್ದೇವೆ ಎಂದರು.
ಕೊರೊನಾ ಹಾವಳಿಯಲ್ಲಿ ಪ್ರಗತಿ ಚಕ್ರ ಸರಾಗವಾಗಿ ಮುನ್ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ. ಮೋದಿ ಮಾರ್ಗದರ್ಶನದಲ್ಲಿ ಇಡೀ ದೇಶದಲ್ಲಿ ಕೋವಿಡ್ ಅನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಕೂಡ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಕೋವಿಡ್ ಸಮಯದಲ್ಲಿ ಪ್ಯಾಕೆಜ್ ಘೋಷಣೆ ಮಾಡಿದ್ದೆವು, ನಮ್ಮ ಸರ್ಕಾರದಿಂದ ವ್ಯಾಪಾರೋದ್ಯಮ ಕಾರ್ಯಾಚರಣೆಗಳಿಗೆ ಅನುವು ಮಾಡಿಕೊಟ್ಟಿದ್ದೇವೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. 1.54 ಲಕ್ಷ ಕೋಟಿ ಮೊತ್ತದ 95 ಹೂಡಿಕೆ ಪ್ರಸ್ತಾಪ ರಾಜ್ಯಕ್ಕೆ ಬಂದಿದೆ. ಬಡ, ಸಣ್ಣಪುಟ್ಟ ಕೆಲಸ ಮಾಡುವ ಎಲ್ಲರಿಗೂ ಆರ್ಥಿಕ ನೆರವು ಕೊಡುವ ಎಲ್ಲ ಪ್ರಯತ್ನ ಮಾಡಿದ್ದೇವೆ ಎಂದರು.
ಬೆಂಗಳೂರು ನಗರದ ಪ್ರಾಶಸ್ತ್ಯ ಕಾಪಾಡಿಕೊಂಡು ವ್ಯಾಪಾರ ಚಟುವಟಿಕೆ ಆರಂಭಗೊಳ್ಳಲು ಮೋದಿ ಕರೆ ನೀಡಿದಂತೆ ಕಾರ್ಯೋನ್ಮುಖರಾಗಿ ಮಿಷನ್ 2022 ಕಾರ್ಯಾಚರಣೆ ಆರಂಭಿಸಿದ್ದೇವೆ. ಒಂದು ವರ್ಷದ ಒಳಗೆ ಬೆಂಗಳೂರು ನಗರದ ಚಿತ್ರಣವೇ ಬದಲಾಗುವ ರೀತಿ ಅಭಿವೃದ್ಧಿ ಕಾರ್ಯ ಮುಂದಿನ ತಿಂಗಳು ಆರಂಭವಾಗಲಿದೆ. ಬೆಂಗಳೂರು ನಗರ ದೇಶದಲ್ಲೇ ಮಾದರಿ ನಗರಿ ಮಾಡಲು ಹೆಚ್ಚಿನ ಹೊತ್ತು ನೀಡಿ, ಪ್ರವಾಸೋದ್ಯಮಕ್ಕೆ ಅನೇಕ ಕಾರ್ಯಕ್ರಮ ರೂಪಿಸಿದ್ದು, ಹಣ ಬಿಡುಗಡೆ ಮಾಡಲಿದ್ದೇವೆ. ಜೋಗ, ಕೆಮ್ಮಣ್ಣುಗುಂಡಿ ಹೀಗೆ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಗಮನ ಕೊಡುತ್ತಿದ್ದೇವೆ. ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಭೂಪಟದಲ್ಲಿ ಒಂದನೇ ಸ್ಥಾನಕ್ಕೆ ಕೊಂಡೊಯ್ಯಬೇಕು ಎನ್ನುವುದು ನನ್ನ ಕನಸಾಗಿದೆ. ಇದಕ್ಕಾಗಿ ಸಂಪುಟ ಸಹೋದ್ಯೋಗಿಗಳು ಕೆಲಸ ಮಾಡಲಿದ್ದಾರೆ ಎಂದರು.
ಹಲವು ಅಗ್ನಿ ಪರೀಕ್ಷೆಗೆ ನಾವು ತುತ್ತಾಗಿದ್ದೇವೆ. ಬರಗಾಲ, ನೆರೆ, ಕೋವಿಡ್ ನಿಂದಾಗಿ ಆರ್ಥಿಕ ಹಿನ್ನೆಡೆ ಆಗಿದೆ. ಆದರೂ ಬಜೆಟ್ನಲ್ಲಿ ಹೇಳಿದಂತೆ ಕಾರ್ಯಕ್ರಮಗಳ ಅನುಷ್ಠಾನ ಮಾಡುತ್ತಿದ್ದೇವೆ. ಕರ್ನಾಟಕವನ್ನು ಸಮೃದ್ಧಿ ರಾಜ್ಯವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಇದೇ ವೇಳೆ ನಾಡಿನ ಜನರಿಗೆ ಹೊಸ ವರ್ಷದ ಶುಭ ಕೋರಿದ ಸಿಎಂ ಯಡಿಯೂರಪ್ಪ, ಹೊಸ ವರ್ಷ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ತರಲಿ ಎಂದು ಹಾರೈಸಿದರು.