ಬೆಂಗಳೂರು:ಸಾರಿಗೆ ನೌಕರರ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ. ಭಾನುವಾರ ವಿಕಾಸಸೌಧದಲ್ಲಿ ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆ ಯಶಸ್ವಿಯಾಗಿದೆ.
ಸಾರಿಗೆ ಯೂನಿಯನ್ಗಳೊಂದಿಗೆ ಲಕ್ಷ್ಮಣ ಸವದಿ ಸಂಧಾನ ಸಭೆ ನಡೆಸಿದ್ದು, ಬಹುತೇಕ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದೆ. ಈ ಕಾರಣದಿಂದ ಮೂರು ದಿನಗಳ ಪ್ರತಿಭಟನೆ ಅಂತ್ಯಗೊಂಡಿದೆ. ನಾಳೆಯಿಂದಲೇ ಬಸ್ಗಳು ರಸ್ತೆಗಿಳಿಯಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಾರಿಗೆ ಮುಖಂಡರ ಜೊತೆ ಸಚಿವರಾದ ಸವದಿ, ಬೊಮ್ಮಾಯಿ, ಆರ್.ಅಶೋಕ್ ಸುದೀರ್ಘ ಚರ್ಚೆ ನಡೆಸಿದ್ದು, ಅವರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸುದೀರ್ಘ ಸಭೆಗಳ ಬಳಿಕ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆ ಬಿಟ್ಟು ಉಳಿದಂತೆ ಅವರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಧಾನದ ಬಳಿಕ ಸಾರಿಗೆ ನೌಕರರಿಗೆ ಸಿಕ್ಕಿದ್ದೇನು..?
- ಸಾರಿಗೆ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ
- ಕೊರೊನಾದಿಂದ ಸಾವನ್ನಪ್ಪಿದ ನೌಕರರಿಗೆ 30 ಲಕ್ಷ ರೂ. ಪರಿಹಾರ
- ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚನೆ
- ತರಬೇತಿಯಲ್ಲಿರುವ ನೌಕರರ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಕೆ
- ನಿಗಮದಲ್ಲಿ ಹೆಚ್ಆರ್ಎಂಎಸ್ ಜಾರಿಗೊಳಿಸಲು ತೀರ್ಮಾನ
- 'ನೋ ಕಲೆಕ್ಷನ್ ನೋ ಇಷ್ಯೂ' ಪದ್ಧತಿಯನ್ನು ಜಾರಿಗೊಳಿಸಲು ನಿರ್ಧಾರ
- ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ (ಬಾಟಾ)
- ಸಾರಿಗೆ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ
ಸಾರಿಗೆ ನೌಕರರ ಸಂತಸ
ಸಾರಿಗೆ ನೌಕರರ ಮುಖಂಡರ ಜೊತೆ ರಾಜ್ಯ ಸರ್ಕಾರದ ನಡೆಸಿದ ಮಾತುಕತೆ ಯಶಸ್ವಿಯಾಗುತ್ತಿದ್ದಂತೆ ಫ್ರೀಡಂಪಾರ್ಕ್ನಲ್ಲಿ ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು ಖುಷಿಯಾಗಿದ್ದಾರೆ.
ಓದಿ:ಚಿಕ್ಕಮಗಳೂರು ವಿಭಾಗದಿಂದ ಮೂರು ಬಸ್ಗಳ ಸಂಚಾರ ಪುನಾರಂಭ
ಇದಕ್ಕೆ ಪ್ರತಿಕ್ರಿಯಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರ ಮುಖಂಡರೊಂದಿಗೆ ನಡೆಸಿದ ಮಾತುಕತೆ ನಡೆಸಿದ ಯಶಸ್ವಿಯಾಗಿದೆ ಎಂದು ಮಾಧ್ಯಮಗಳಿಂದ ತಿಳಿದುಬಂದಿದೆ. ಯೂನಿಯನ್ ಮುಖಂಡರು ಸ್ಥಳಕ್ಕೆ ಬಂದಿಲ್ಲ. ಅವರೊಂದಿಗೆ ಜೊತೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.