ಬೆಂಗಳೂರು:ಹೊಸ ಆಯಾಮ, ಸಂಶೋಧನೆಗಳ ಮೂಲಕ ಬೆಂಗಳೂರಿನಲ್ಲಿ ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸುವಂತೆ ಬಾಷ್ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಆಡುಗೋಡಿಯಲ್ಲಿ ನಿರ್ಮಿಸಿರುವ ಬಾಷ್ ಸ್ಮಾರ್ಟ್ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿಯವರು ಶಿಕ್ಷಣ, ಆರೋಗ್ಯ, ಉತ್ಪಾದನೆ, ಸಂಶೋಧನೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮುಂದಿನ 25 ವರ್ಷಗಳು ಬಹಳ ಪ್ರಮುಖವಾಗಿದ್ದು, ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ, ಸಮೃದ್ಧತೆ, ಜನರ ಜೀವನಮಟ್ಟ ಸುಧಾರಣೆ, ಉತ್ತಮ ಪರಿಸರ, ಪರಿಸರ ಮತ್ತು ಉದ್ಯಮಗಳ ಸಂಯೋಜನೆಗೆ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ತನ್ನ ಛಾಪು ಮೂಡಿಸಿರುವ ಬಾಷ್ ಸಂಸ್ಥೆ ಮೇಲ್ಪಂಕ್ತಿ ಹಾಕಬೇಕು ಎಂದು ತಿಳಿಸಿದರು.
ಸಂಸ್ಕೃತಿಯಾಗಿ ಬೆಳೆದ ಬಾಷ್ ಸಂಸ್ಥೆ:ಬಾಷ್ ಕಂಪನಿ ಯುವ ಇಂಜಿನಿಯರ್ಸ್ಗಳ ಕನಸಿನ ಸಂಸ್ಥೆ. ನಾನು ಇಂಜಿನಿಯರ್ ಕಾಲೇಜಿನಲ್ಲಿದ್ದಾಗ ಟಾಟಾ ಮೋಟರ್ಸ್, ಬಾಷ್ನಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದೆ. ಇದು ಕೇವಲ ಉತ್ಪಾದನಾ ಅಥವಾ ಸಾಫ್ಟ್ವೇರ್ ಕಂಪನಿಯಲ್ಲ, ಬಾಷ್ ಒಂದು ಸಂಸ್ಕೃತಿಯಾಗಿ ಬೆಳೆದಿದೆ. ಬದ್ಧತೆ, ಸಮರ್ಪಣೆ, ಪರಿಶ್ರಮಗಳಿಂದ ಇದು ಸಾಧ್ಯವಾಗಿದೆ ಎಂದರು.