ಬೆಂಗಳೂರು: ಕೋವಿಡ್ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ವೇಗ ನೀಡಲು18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್ ನೀಡಲು ಸರ್ಕಾರ ಮುಂದಾಗುತ್ತಿದೆ. ಏಪ್ರಿಲ್ 10ರಿಂದ (ನಾಳೆ) ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 18 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣವಾಗಿದ್ದಲ್ಲಿ, ಈ ಡೋಸ್ ಪಡೆಯಬಹುದು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ರೋಗ ಪೂರ್ವ ನಿಯಂತ್ರಣ ಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ. ಇದೇ ರೀತಿ ಕೋವಿಡ್ ಲಸಿಕಾಕರಣಕ್ಕೂ ವೇಗ ನೀಡಿದ್ದು, ದೇಶದಲ್ಲಿ ಈವರೆಗೆ 185 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಲಸಿಕಾಕರಣವನ್ನು ಚುರುಕುಗೊಳಿಸಿರುವುದರಿಂದ ಈವರೆಗೆ 10.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದರ ಜೊತೆಗೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60+ ವಯಸ್ಸಿನ ನಾಗರಿಕರಿಗೆ ಮುನ್ನೆಚ್ಚರಿಕೆಯ ಡೋಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.