ಕರ್ನಾಟಕ

karnataka

ETV Bharat / city

ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶ ಮತ್ತೆ ಮುಂದೂಡಿಕೆ ಪಕ್ಕಾ: ಕಾರಣವೇನು ಗೊತ್ತಾ?

ಸರ್ಕಾರದ ಸಾಧನಾ ಸಮಾವೇಶ ಕುರಿತಂತೆ ಕಳೆದ ರಾತ್ರಿಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಆದರೆ, ಈ ಸಭೆಯ ಬೆನ್ನಲ್ಲೇ ಆರ್​ಎಸ್​​ಎಸ್ ಕಚೇರಿಯಿಂದ ಸಿಎಂಗೆ ಬುಲಾವ್​ ನೀಡಿ ಈ ಸಮಾವೇಶ ಮುಂದೂವಂತೆ ಸೂಚನೆ ನೀಡಿದೆ.

bommai-governments-sadhana-samavesha-to-be-postponed-again
ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶ ಮತ್ತೆ ಮುಂದೂಡಿಕೆ ಖಚಿತ: ಕಾರಣವೇನು ಗೊತ್ತಾ?

By

Published : Aug 17, 2022, 3:24 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶಕ್ಕೆ ಮುಹೂರ್ತ ಕೂಡಿ ಬರುತ್ತಿಲ್ಲ. ಈ ಹಿಂದೆ ಮುಂದೂಡಿಕೆಯಾಗಿದ್ದ ಸಮಾವೇಶವನ್ನು ಆಗಸ್ಟ್ 28 ರಂದು ನಡೆಸುವ ಕುರಿತು ಸಿಎಂ ಸಭೆ ನಡೆಸಿದ ಬೆನ್ನಲ್ಲೇ ಕೇಶವ ಕೃಪಾದಿಂದ ಬಂದ ಮಹತ್ವದ ಸೂಚನೆಯಿಂದಾಗಿ ಮತ್ತೊಮ್ಮೆ ಸಮಾವೇಶ ಮುಂದೂಡಿಕೆಯಾಗುವುದು ಪಕ್ಕಾ ಆಗಿದೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಂತರ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದ್ದರಿಂದ ಜುಲೈ 28 ರಂದು ನಿಗದಿಯಾಗಿದ್ದ ಸರ್ಕಾರದ ಸಾಧನಾ ಸಮಾವೇಶ ಮುಂದೂಡಲಾಗಿತ್ತು. ಇದೀಗ ಪರಿಸ್ಥಿತಿ ಶಾಂತವಾಗಿದ್ದು ಆಗಸ್ಟ್ 28ರಂದು ದೊಡ್ಡಬಳ್ಳಾಪುರದಲ್ಲೇ ಸಮಾವೇಶ ಆಯೋಜನೆಗೆ ನಿರ್ಧರಿಸಿ, ಕಳೆದ ರಾತ್ರಿಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಸಮಾವೇಶದ ರೂಪುರೇಷೆ, ಸಿದ್ದತೆ ಕುರಿತು ಚರ್ಚಿಸಿ ಎಲ್ಲ ತಯಾರಿ ಮಾಡಿಕೊಳ್ಳಲು ಸಚಿವರು ಮತ್ತು ಶಾಸಕರ ತಂಡಕ್ಕೆ ಸಿಎಂ ನಿರ್ದೇಶನವನ್ನೂ ನೀಡಿದರು.

ಸಚಿವರು, ಶಾಸಕರ ಜೊತೆಗಿನ ಸಭೆ ಮುಗಿಯುತ್ತಿದ್ದಂತೆ ಕೇಶವ ಕೃಪಾದಿಂದ ಸಿಎಂ ಬೊಮ್ಮಾಯಿ ಅವರಿಗೆ ಬುಲಾವ್ ಬಂದಿದೆ. ಸಂಘದ ಆಹ್ವಾನದಂತೆ ಚಾಮರಾಜಪೇಟೆಯಲ್ಲಿರುವ ಆರ್​​ಎಸ್​ಎಸ್ ಕಚೇರಿಗೆ ಭೇಟಿ ನೀಡಿದರು. ರಾತ್ರಿ 9.30ರಿಂದ 11 ಗಂಟೆಯವರೆಗೂ ಕೇಶವಕೃಪಾದಲ್ಲಿ ಆರ್​ಎಸ್ಎಸ್​ನ ಅಖಿಲ ಭಾರತೀಯ ಸರ ಸಹ ಕಾರ್ಯವಾಹ ಸಿ.ಆರ್.ಮುಕುಂದ್‌ ಸೇರಿದಂತೆ ಸಂಘದ ಹಿರಿಯರ ಜೊತೆ ಸಿಎಂ ಮಾತುಕತೆ ನಡೆಸಿದರು.

ಆ.28ರಂದು ಪುತ್ತೂರಿನಲ್ಲಿ ಬೈಠಕ್: ಈ ಭೇಟಿ ವೇಳೆ ಸರ್ಕಾರದ ಸಾಧನಾ ಸಮಾವೇಶದ ದಿನಾಂಕ ಬದಲಿಸುವಂತೆ ಸಿ.ಆರ್.ಮುಕುಂದ್ ಅವರು ಸಿಎಂ ಬೊಮ್ಮಾಯಿ‌ ಅವರಿಗೆ ಸಲಹೆ ನೀಡಿದ್ದಾರೆ. ಆಗಸ್ಟ್ 28 ರಂದು ಪುತ್ತೂರಿನಲ್ಲಿ ಸಂಘದ ಪ್ರಾಂತ ಬೈಠಕ್ ನಡೆಯಲಿದೆ. ಈ ಬೈಠಕ್​ಗೆ ಈಗಾಗಲೇ ಸಿದ್ದತೆ ಪೂರ್ಣಗೊಂಡಿದೆ. ಆ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಬ್ಬರೂ ಭಾಗಿ ಆಗಬೇಕಿದೆ. ಹೀಗಾಗಿ ಸರ್ಕಾರದ ಸಾಧನಾ ಸಮಾವೇಶದ ದಿನಾಂಕ ಬದಲಿಸುವಂತೆ ತಿಳಿಸಿದ್ದಾರೆ. ಹೀಗಾಗಿ ಸರ್ಕಾರದ ಸಮಾವೇಶ ಮತ್ತೆ ಮುಂದುಡೂವ ಬಗ್ಗೆ ಚರ್ಚೆ ಆಗಿದೆ. ಬಹುತೇಕ ಸಮಾವೇಶ ಮತ್ತೆ ಮುಂದೂಡಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ಬಗ್ಗೆಯೂ ನಡೆದಿದೆ. ಹಿಂದೂಪರ ಕಾರ್ಯಕರ್ತರ ಹತ್ಯೆ ಪ್ರಕರಣಗಳು, ಈದ್ಗಾ ಮೈದಾನದ ವಿವಾದ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಫಲತೆ ಕುರಿತು ಸಮಲೋಚನೆ ನಡೆಸಲಾಗಿದೆ. ಇತ್ತೀಚೆಗಷ್ಟೇ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿರುವ ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಸರ್ಕಾರ ಮತ್ತು ಸಂಘಟನೆ ಜೊತೆ ಜೊತೆಯಾಗಿ ಹೋಗುತ್ತಿರುವ ಕುರಿತು ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ. ಕೇಶವಕೃಪಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಸಚಿವ ಆರ್.ಅಶೋಕ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ:ಬಿಜೆಪಿ ಸಂಸದೀಯ ಮಂಡಳಿ, ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದ ಬಿಎಸ್‌ವೈ

ABOUT THE AUTHOR

...view details