ವಾಹನ ತಪಾಸಣೆ ನಡೆಸುವ ಶೇ.50 ರಷ್ಟು ಸಂಚಾರಿ ಪೊಲೀಸರಿಗೆ ಬಾಡಿ ಕ್ಯಾಮರಾ: ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ - ಬಾಡಿ ಕ್ಯಾಮರಾ
ಹಿಂದಿನಿಂದಲೂ ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರಿಗೆ ಶೀಘ್ರದಲ್ಲೇ ಬಾಡಿ ಕ್ಯಾಮರಾ ನೀಡಲಾಗುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ನಿನ್ನೆ ಲೈವ್‌ಗೆ ಬಂದು ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಬೆಂಗಳೂರು:ವಾಹನ ಸಂಚಾರದ ವೇಳೆ ತಪಾಸಣೆ ನಡೆಸುವ ಶೇ.50 ರಷ್ಟು ಸಂಚಾರಿ ಪೊಲೀಸರಿಗೆ ಶೀಘ್ರದಲ್ಲೇ ಬಾಡಿ ಕ್ಯಾಮರಾ ನೀಡಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
ಕ್ಯಾಮರಾ ನೀಡಬೇಕು ಎಂದು ಹಿಂದಿನಿಂದಲೂ ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದರು. ಕೆಲವರಿಗೆ ಬಾಡಿ ಓನ್ ಕ್ಯಾಮರಾ ನೀಡಿದ್ದರೂ ಪೂರ್ಣ ಪ್ರಮಾಣದಲ್ಲಿ ನೀಡಲಾಗಿರಲಿಲ್ಲ. ಇದೀಗ ಶೇ. 50ರಷ್ಟು ಟ್ರಾಫಿಕ್ ಪೊಲೀಸರಿಗೆ ಕ್ಯಾಮರಾ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ನಿನ್ನೆ ಲೈವ್‌ಗೆ ಬಂದು ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ಸಂಚಾರ ಪೊಲೀಸರು ಸಾರ್ವಜನಿಕರ ಜತೆ ಕಟುವಾಗಿ ವರ್ತಿಸಬಾರದು. ಕಾನೂನು ಉಲ್ಲಂಘಿಸಿದವರೊಂದಿಗೆ ಸೌಜನ್ಯದಿಂದಲೇ ವರ್ತಿಸಿ ದಂಡ ವಿಧಿಸಬೇಕು. ಒಂದುವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸೌಜನ್ಯದಿಂದ ವರ್ತಿಸುವ ಕುರಿತು ಹೊಸದಾಗಿ ನೇಮಕಗೊಂಡವರಿಗೆ ಸಾಫ್ಟ್ ಸ್ಕಿಲ್ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಟ್ರಾಫಿಕ್ ಪೊಲೀಸರು ಸುಖಾಸುಮ್ಮನೆ ವಾಹನ ತಡೆದು ಪರಿಶೀಲಿಸುತ್ತಾರೆ ಎಂದು ಸಾರ್ವಜನಿಕರೊಬ್ಬರು ದೂರಿದ್ದಕ್ಕೆ, ಸಾಮಾನ್ಯವಾಗಿ ಎರಡು ರೀತಿಯ ತಪಾಸಣೆ ನೆಡೆಸುತ್ತಾರೆ. ಕಣ್ಣಿಗೆ ಕಾಣಿಸುವಂಥ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರ ವಾಹನ ತಡೆಯುತ್ತೇವೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಮತ್ತು ಹಳೆಯ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ತಡೆದು ತಪಾಸಣೆ ನಡೆಸಲಾಗುತ್ತದೆ ಎಂದು ರವಿಕಾಂತೇಗೌಡ ಉತ್ತರಿಸಿದರು.