ಕರ್ನಾಟಕ

karnataka

ETV Bharat / city

ಸ್ಥಗಿತಗೊಂಡಿದ್ದ ಸಹಾಯ ಹಸ್ತದ ಬಸ್​ ಪಾಸ್ ವಿತರಣೆ ಮರು ಆರಂಭಿಸಿದ ಬಿಎಂಟಿಸಿ - ಸಹಾಯಹಸ್ತ ಪಾಸ್ ವಿತರಣೆ ಮರು ಆರಂಭಿಸಿದ ಬಿಎಂಟಿಸಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಪ್ರಯಾಣಿಸಲು ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ನೀಡುವ ಸಹಾಯ ಹಸ್ತದ ಪಾಸ್​ ಮರು ವಿತರಣೆಯನ್ನು ಮರು ಆರಂಭಿಸಿದೆ.

ಬಿಎಂಟಿಸಿ
ಬಿಎಂಟಿಸಿ

By

Published : Jun 4, 2022, 1:14 PM IST

ಬೆಂಗಳೂರು: ಸ್ಥಗಿತಗೊಳಿಸಿದ್ದ ಸಹಾಯ ಹಸ್ತ ಪಾಸ್​ ಮರು ವಿತರಣೆಯನ್ನು ಬಿಎಂಟಿಸಿ ಮರು ಆರಂಭಿಸಿದೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಂಸ್ಥೆ, ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ವಿತರಿಸಲಾಗುತ್ತಿದ್ದ ಸಹಾಯ ಹಸ್ತ ಪಾಸ್​ಗಳನ್ನು ಜೂ.1 ರಿಂದ ಸ್ಥಗಿತಗೊಳಿಸಲಾಗಿತ್ತು. ಸೂಕ್ತಾಧಿಕಾರಿಗಳ ಆದೇಶದ ಮೇರೆಗೆ ಜೂ.3 ರಿಂದ ಸಂಸ್ಥೆಯ ಟಿಟಿಎಂಸಿ ಮತ್ತು ಬಸ್ ನಿಲ್ದಾಣಗಳಲ್ಲಿ ಮೊದಲಿನಂತೆ ವಿತರಿಸಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ.

ಕಾರ್ಮಿಕರಿಗೆ ಸಹಾಯಹಸ್ತ ಪಾಸ್​ಗಳನ್ನು ಬಿಎಂಟಿಸಿ 2021ರ ಡಿಸೆಂಬರ್ ತಿಂಗಳಲ್ಲಿ ಆರಂಭಿಸಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮಹತ್ವದ ಕಾರ್ಯಗಳಲ್ಲಿ ಇದೂ ಕೂಡ ಒಂದಾಗಿದೆ. ಆರಂಭದಲ್ಲಿ ಸಹಾಯ ಹಸ್ತ ಬಸ್ ಪಾಸ್‌ಗಳನ್ನು ನಗರದ 20 ಕಡೆ ವಿತರಿಸಲು ಯೋಜನೆ ರೂಪಿಸಿತ್ತು.

ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ವೈಟ್‌ಫೀಲ್ಡ್ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಬನಶಂಕರಿ, ಜಯನಗರ, ದೊಮ್ಮಲೂರು, ಕೋರಮಂಗಲ, ಕೆಂಗೇರಿ, ಯಲಹಂಕ, ಹೊಸಕೋಟೆ, ಸುಮ್ಮನಹಳ್ಳಿ ಡಿಪ್ರೊ, ಕೆ.ಆರ್.ಪುರ ಡಿಪ್ರೊ, ಎಚ್ಎಸ್ಆರ್ ಲೇಔಟ್ ಡಿಪ್ರೊ, ಹೆಬ್ಬಾಳ ಡಿಪೊ, ನೆಲಮಂಗಲ ಡಿಪೊ, ಬಗಲಗುಂಟೆಯ ಕಾರ್ಮಿಕ ಇಲಾಖೆ ಕಚೇರಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕೇಂದ್ರ ಕಚೇರಿಯಲ್ಲಿ ಪಾಸ್‌ಗಳನ್ನು ವಿತರಿಸಲಾಗುತ್ತಿತ್ತು.

ಪಾಸ್ ಪಡೆಯುವವರು ಗುರುತಿನ ಚೀಟಿ, ಆಧಾರ್ ಕಾರ್ಡ್, ಭಾವಚಿತ್ರಗಳ ಸಹಿತ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆಯಬಹುದು ಎಂದು ತಿಳಿಸಲಾಗಿತ್ತು. ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದೊಂದಿಗೆ ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ 'ವಾರ್ಷಿಕ ಉಚಿತ ಸಹಾಯ ಹಸ್ತ ಬಸ್ ಪಾಸ್​' ವಿತರಿಸುತ್ತಿತ್ತು.

ಆದರೆ, ಸಾರಿಗೆ ಇಲಾಖೆಗೆ ಕಾರ್ಮಿಕ ಇಲಾಖೆಯ ಮೂಲಕ ಈ ಪಾಸ್ ವಿತರಣೆಯ ಅನುದಾನ ಬಿಡುಗಡೆ ಆಗಬೇಕಿತ್ತು. ಕಾರ್ಮಿಕ ಇಲಾಖೆ 39 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡ ಹಿನ್ನೆಲೆ ಪಾಸ್ ವಿತರಣೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಹಣ ಪಾವತಿಸುವ ಭರವಸೆಯನ್ನು ಸಾರಿಗೆ ಇಲಾಖೆಗೆ ಕಾರ್ಮಿಕ ಇಲಾಖೆ ನೀಡಿದ ಹಿನ್ನೆಲೆ ಪಾಸ್ ವಿತರಣೆ ಮರು ಆರಂಭಗೊಂಡಿದೆ.

ಇದನ್ನೂ ಓದಿ:ಚೀನಾ-ಭಾರತದ ನಿಷೇಧಿತ ಪ್ರದೇಶದಲ್ಲಿ ವಾಸ: ನಾನು ಪಾರ್ವತಿ ದೇವಿ ಅವತಾರ ಎನ್ನುತ್ತಿರುವ ಮಹಿಳೆ..ಕಾರಣ?

ABOUT THE AUTHOR

...view details