ಬೆಂಗಳೂರು:ಮಾಜಿ ಸಚಿವಡಿ.ಕೆ. ಶಿವಕುಮಾರ್ ಅವರ ಬಂಧನ ಖಂಡಿಸಿ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಬಿಎಂಟಿಸಿ ಒಕ್ಕಲಿಗ ನೌಕರರಿಗೆ ಮೇಲಾಧಿಕಾರಿಗಳಿಂದ ಆದೇಶ ಹೊರಡಿಸಲಾಗಿದೆ.
ಬಿಎಂಟಿಸಿಯಲ್ಲಿ 3 ಸಾವಿರಕ್ಕೂ ಹೆಚ್ಚು ಒಕ್ಕಲಿಗ ನೌಕರರಿದ್ದಾರೆ. ಇವರು ಜಾತಿ ಬೆಂಬಲಕ್ಕೆ ನಿಲ್ಲುವ ನಿಟ್ಟಿನಲ್ಲಿ, ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಹೀಗಾಗಿ ಒಕ್ಕಲಿಗ ನೌಕರರ ಹಾಜರಾತಿ ಹಾಗೂ ಗೈರಿನ ಬಗ್ಗೆ ನಿಗಾ ಇಡುವಂತೆ ಡಿಪೋ ಮ್ಯಾನೇಜರ್ಸ್ಗೆ ಮೇಲಾಧಿಕಾರಿಗಳಿಂದ ಸೂಚನೆ ನೀಡಲಾಗಿದೆ. ಒಂದು ವೇಳೆ ಬಿಎಂಟಿಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಹಿತಿ ಸಿಕ್ಕರೆ, ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಬಿಎಂಟಿಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡರೇ, ಸಾರಿಗೆ ಸಂಚಾರದ ಮೇಲೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ಮೇಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.