ಬೆಂಗಳೂರು:ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ಬೆದರಿಕೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ರಾಹುಲ್ ಭಟ್ನ ವಿಚಾರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಮತ್ತೊಂದೆಡೆ ಆರೋಪಿ ರಾಹುಲ್ ಭಟ್ನನ್ನು ವೈದ್ಯಕೀಯ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ವೈದ್ಯಕೀಯ ಚಿಕಿತ್ಸೆ ಬಳಿಕ ಮತ್ತೆ ಸಿಸಿಬಿ ಎಸಿಪಿ ಜಗನಾಥ್ ರೈ ನೇತೃತ್ವದ ತಂಡ ವಿಚಾರಣೆ ಮುಂದುವರಿಸಲಿದೆ.
ಪ್ರಕರಣ ದೂರುದಾರರಾಗಿರುವ ಸಚಿವರ ಪುತ್ರ ನಿಶಾಂತ್ಗೆ ಕಳೆದ ತಿಂಗಳು 25 ರಂದು ಕರೆ ಮಾಡಿ ಹಣ ನೀಡದಿದ್ದರೆ ಆಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಈ ಸಂಬಂಧ ನಿನ್ನೆ ರಾಹುಲ್ ಭಟ್ನನ್ನು ಬಂಧಿಸಿ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ.
ಜಪ್ತಿ ಮಾಡಿಕೊಂಡಿದ್ದ ಮೊಬೈಲ್ ಪರಿಶೀಲನೆ ನಡೆಸಿದಾಗ ನಿಶಾಂತ್ಗೆ ಸಂಬಂಧಿಸಿದ ವಿಡಿಯೊ ಪತ್ತೆಯಾಗಿರುವುದು ಕಂಡುಬಂದಿದೆ. ನಿಶಾಂತ್ಗೆ ಕಳುಹಿಸಲಾಗಿರುವ ಮೂಲ ವಿಡಿಯೋ ದೃಢೀಕರಿಸಲು ಹಾಗೂ ಡಿಲೀಟ್ ಮಾಡಲಾಗಿರುವ ಡೇಟಾ ಸಂಗ್ರಹಕ್ಕಾಗಿ ಮೊಬೈಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.