ಬೆಂಗಳೂರು:ರಾಷ್ಟ್ರ ರೈತನಾಯಕ ರಾಜೇಶ್ ಟಿಕಾಯತ್ಗೆ ಮಸಿ ಬಳಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ಬೆನ್ನಲೇ ಹೈಗ್ರೌಂಡ್ಸ್ ಪೊಲೀಸರು ಮೂವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೊಂದೆಡೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ.
ಘಟನೆಗೆ ನಿಖರ ಕಾರಣವೇನು? ದುಷ್ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಹೈಗ್ರೌಂಡ್ಸ್ ಪೊಲೀಸರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಮತ್ತು ಶಿವಕುಮಾರ್ನ ವಿಚಾರಣೆಗೆ ಒಳಪಡಿಸಿದ್ದು, ಆರೋಪಿಗಳು ಯಾರ ಕುಮ್ಮಕ್ಕಿನಿಂದ ಈ ಕೃತ್ಯವೆಸಗಿದ್ದರು, ಯಾವ ಉದ್ದೇಶಕ್ಕೆ ಮಸಿ ಬಳಿದು ಹಲ್ಲೆ ಮಾಡಿದ್ದರು ಎಂದು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಕನ್ನಡ ಮಾತನಾಡಿಲ್ಲ ಅಂತ ಕೃತ್ಯ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ. ಆದರೆ ಟಿಕಾಯತ್ ಉತ್ತರಪ್ರದೇಶದವರಾದ್ದರಿಂದ ಆರೋಪಿಗಳ ಹೇಳಿಕೆ ಪೊಲೀಸರಿಗೆ ಅನುಮಾನ ಮೂಡಿಸುತ್ತಿದೆ. ಆರೋಪಿಗಳ ಹೇಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಕೃತ್ಯದ ಹಿಂದೆ ಕಾಣದ ಕೈ ಇರುವುದರ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ.
ಮೊಬೈಲ್ ವಶಕ್ಕೆ ಪಡೆದು ಸಂಭಾಷಣೆ ಕುರಿತು ತನಿಖೆ: ಭರತ್ ಶೆಟ್ಟಿ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಶಿವಕುಮಾರ್ ಕೂಡ ಕೆಲ ಕೇಸ್ನಲ್ಲಿ ಜೈಲು ಸೇರಿದ್ದಾಗಿ ಮಾಹಿತಿ ಇದೆ. ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸರು ಇಂದು ಮೂವರು ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹೌಗ್ರೌಂಡ್ಸ್ ಠಾಣಾ ಇನ್ಸ್ಪೆಕ್ಟರ್ ಶಿವಸ್ವಾಮಿಯಿಂದ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಮೂವರು ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಘಟನೆಗೂ ಮುನ್ನ ಯಾರ ಜೊತೆ ಸಂಪರ್ಕ ಮಾಡಿದ್ದರು ಅಂತ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣ ಕುರಿತು ಕೇಂದ್ರ ವಿಭಾಗದ ಡಿಸಿಪಿ ಶರಣಪ್ಪ ಮಾತನಾಡಿ, ಟಿಕಾಯತ್ ಅವರ ವಿರುದ್ಧ ಹಲ್ಲೆ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗಿದೆ. ಮೂವರು ಅರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಅರೋಪಿಗಳು ಪೂರ್ವಾಪರ ವಿಚಾರಣೆ ನಡೆಸಲಾಗುತ್ತಿದೆ. ಮಸಿ ಬಳಿಯಲು ಕಪ್ಪು ಬಣ್ಣದ ಪೈಂಟ್ ತೆಗೆದುಕೊಂಡು ಬಂದಿದ್ದಾರೆ. ನಂತರ ಸುದ್ದಿಗೋಷ್ಠಿಯಲ್ಲಿ ನಡೆಯುವಾಗ ಹಲ್ಲೆ ಮಾಡಿದ್ದಾರೆ. ಆರೋಪಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಳಲಿ ಮಸೀದಿ ವಿವಾದ : ವಿಹೆಚ್ಪಿ ಅರ್ಜಿ ವಜಾಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್