ಬೆಂಗಳೂರು:Black Fungus ಸದ್ದಿಲ್ಲದೇ ನಿತ್ಯ ಎರಡಂಕಿ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರನ್ನು ಕಾಡ್ತಿದೆ. ಪ್ರತಿ ಜಿಲ್ಲೆಯಲ್ಲೂ ಈ ಶಿಲೀಂಧ್ರ ಪತ್ತೆಯಾಗಿದ್ದು, ರಾಜ್ಯದಲ್ಲಿ ಈ ತನಕ 303 ಸೋಂಕಿತರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
3,491 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಂಕ್ರಾಮಿಕ ಕೋವಿಡ್ ಸೋಂಕಿನಿಂದ ಕಂಗೆಟ್ಟಿರುವ ಜನಸಾಮಾನ್ಯರು, ಇದೀಗ ಬ್ಲ್ಯಾಕ್ ಫಂಗಸ್ ಕಾಟವನ್ನೂ ಸಹಿಸಿಕೊಳ್ಳಬೇಕಿದೆ. ಕೋವಿಡ್ ಸೋಂಕಿನ ಕುರಿತೇ ಇನ್ನೂ ಸರಿಯಾಗಿ ತಿಳಿಯಲು ಆಗದೇ ಇರುವಾಗ, ಇದೀಗ ಬ್ಲ್ಯಾಕ್ ಫಂಗಸ್ ಬಗ್ಗೆ ಜನ ಚಿಂತಿಸುವಂತಾಗಿದೆ.
ಕೋವಿಡ್ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕಳೆದುಕೊಂಡವರೇ ಟಾರ್ಗೆಟ್ ಆಗ್ತಿದ್ದಾರೆ. ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿಹೀನತೆ ಕಾಡಲಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆಯದೇ ಇದ್ದರೆ ನಂತರದ ದಿನದಲ್ಲಿ ಮೆದುಳಿಗೆ ಸೋಂಕು ವ್ಯಾಪ್ತಿಸಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇರಲಿದೆ. ಹಲವರಿಗೆ ಕೊರೊನಾ ಸೋಂಕು ಬಂದು ಹೋಗಿರುವುದೇ ತಿಳಿಯದೇ, ಆ್ಯಂಟಿಬಾಡಿ ಟೆಸ್ಟ್ ಮೊರೆ ಹೋಗ್ತಿದ್ದಾರೆ. ಹೀಗೆ, ಕೊರೊನಾ ಸೋಂಕು ಬಂದು ಹೋಗಿರುವವರಲ್ಲೂ ಬ್ಲ್ಯಾಕ್ ಫಂಗಸ್ ಕಾಡುತ್ತಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯವಿದೆ.