ಬೆಂಗಳೂರು:ಕೇವಲ ಪ್ರತಿಷ್ಠೆ, ಅಧಿಕಾರದಿಂದ ಗೌರವ ಸಿಗುವುದಿಲ್ಲ. ಅದನ್ನು ಸದುಪಯೋಗ ಪಡಿಸಿಕೊಂಡು ಬದಲಾವಣೆ ತರಬೇಕು. ಆಗ ಗೌರವ ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. 30 ವರ್ಷಗಳು ಕಳೆದರೂ ಅಬ್ದುಲ್ ನಜೀರ್ ಸಾಬ್ ಅಥವಾ ನೀರ್ ಸಾಬ್ ಯಾರಿಗೆ ಗೊತ್ತಿಲ್ಲ ಹೇಳಿ?. ಹಾಗೆ ನಮ್ಮ ಕೆಲಸ ನಮ್ಮ ಗುರುತು ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಗ್ರಾ.ಪಂ ವಿಧಾನ ಪರಿಷತ್, ವಿಧಾನಸಭೆಗೆ ಹೆಬ್ಬಾಗಿಲಿದ್ದಂತೆ
ಯಲಹಂಕದ ಸಿಂಗನಾಯಕನ ಹಳ್ಳಿಯಲ್ಲಿ ಇಂದು ನಡೆದ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಸದಸ್ಯರು ಬಹುತೇಕ ನಿರ್ಣಾಯಕ ಮತ್ತು ಸ್ಥಳೀಯ ಶಕ್ತಿ. ಗ್ರಾಮ ಪಂಚಾಯಿತಿ ವಿಧಾನ ಪರಿಷತ್, ವಿಧಾನಸಭೆಗೆ ಹೆಬ್ಬಾಗಿಲು ಇದ್ದಂತೆ. ವಿಧಾನ ಪರಿಷತ್ ಪ್ರವೇಶಿಸಲು ಇಚ್ಛೆ ಇರುವವರೇ ಹೆಚ್ಚಾಗಿ ಗ್ರಾಮ ಪಂಚಾಯಿತಿಗಳನ್ನು ಪ್ರವೇಶಿಸುತ್ತಿದ್ದಾರೆ. ಎಲ್ಲ ಪಕ್ಷಗಳಲ್ಲೂ ಇಂತಹವರಿದ್ದಾರೆ. ಕೇವಲ ನಮ್ಮ ಪಕ್ಷದಲ್ಲಿ ಅಲ್ಲ ಎಂದರು.
ದೇಶದಲ್ಲಿ ಚೆಕ್ಗೆ ಸಹಿ ಮಾಡುವ ಅಧಿಕಾರವನ್ನು ಕೇವಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಬೇರೆ ಯಾವ ಜನಪ್ರತಿನಿಧಿಗಳಿಗೆ ಇಲ್ಲ ಎಂದು ಅವರು ವಿವರಿಸಿದರು.
ಕಾಂಗ್ರೆಸ್ ನಮ್ಮ ಯೋಚನಾ ಶಕ್ತಿಯನ್ನೇ ಹಾಳು ಮಾಡುತ್ತದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಪಕ್ಷಪಾತ ಎಲ್ಲರಿಗೂ ತಿಳಿದಿದೆ. ಅದು ಚುನಾಯಿತ ಪ್ರತಿನಿಧಿಗಳ ಯೋಚನಾ ಶಕ್ತಿಯನ್ನೇ ಹಾಳು ಮಾಡಿ, ಅವರ ದಿಕ್ಸೂಚಿಯನ್ನೇ ಬದಲಾಯಿಸಿದ್ದು, ದುರಂತ ಎಂದು ದೂರಿದರು.
ಹತ್ತಿರದಿಂದ ಸಮಸ್ಯೆ ನೋಡಲು ಅವಕಾಶ
ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅನ್ನೋದು ಯಾವ ದೆಹಲಿ ನಾಯಕರಿಗೂ ಇಲ್ಲ. ಅಧಿಕಾರ ಇರುವುದು ಸೇವೆ ಮಾಡಲು. ಒಂದು ಮೈಕ್ ಮೂಲಕ ನೀರು ಬರುವುದನ್ನು ಜನರಿಗೆ ತಿಳಿಸಬಹುದು. ಜನ ಸಾಮಾನ್ಯರ ಸಮಸ್ಯೆಗಳನ್ನು ಹತ್ತಿರದಿಂದ ನೋಡಲು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಲು ಉತ್ತಮ ವೇದಿಕೆ ಆಗಲಿದೆ. ಅದನ್ನ ಒಳ್ಳೆಯದಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.