ಬೆಂಗಳೂರು: ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟ್ವೀಟ್ ವಾರ್ ಮುಂದುವರೆದಿದೆ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅಧಿಕಾರದಲ್ಲಿದ್ದಾಗ ಕೆಲಸ ಮಾಡಿದ್ದರೆ ಕಾಂಗ್ರೆಸ್ ಪಕ್ಷವನ್ನು ಜನತೆ ಮನೆಗೇಕೆ ಕಳುಹಿಸುತ್ತಿದ್ದರು? ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಮತ್ತು ಸುಳ್ಳುಗಳು ಹೆಸರಿನ ಹ್ಯಾಷ್ಟ್ಯಾಗ್ನೊಂದಿಗೆ ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿ ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ಮತ ಕೊಡಿ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯನವರೇ, ಉತ್ತರ ಕರ್ನಾಟಕದ ಜನತೆಯ ಮುಂದೆ ಎಷ್ಟು ಬಾರಿ ಸುಳ್ಳು ಹೇಳುತ್ತೀರಿ? ಕೆಲಸ ಮಾಡಿದ್ದರೆ ಕಾಂಗ್ರೆಸ್ ಪಕ್ಷವನ್ನು ಜನತೆ ಮನೆಗೇಕೆ ಕಳುಹಿಸುತ್ತಿದ್ದರು? ಎಂದು ಪ್ರಶ್ನಿಸಿದೆ.
ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸಿಗರೇ ಈ ಪ್ರಶ್ನೆಗಳಿಗೆ ಉತ್ತರಿಸಿ...
ಕೃಷ್ಣಾ ಮೇಲ್ದಂಡೆ ಯೋಜನೆಗೆ ನಿಮ್ಮ ಕಾಲದಲ್ಲಿ ಎಷ್ಟು ಹಣ ನೀಡಿದ್ದೀರಿ? ಕೃಷ್ಣೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂಬ ಮಾತನ್ನು ಈಡೇರಿಸಿದ್ದೀರಾ? ನಿಮ್ಮ ಆಡಳಿತದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ಏಕಾಗಲಿಲ್ಲ? ಉತ್ತರ ಕರ್ನಾಟಕಕ್ಕೆ ಸರ್ಕಾರಿ ಕಚೇರಿ ವರ್ಗಾವಣೆ ಪ್ರಸ್ತಾಪ ಈಡೇರಲಿಲ್ಲವೇಕೆ? ಎಂದು ತರಾಟೆ ತೆಗೆದುಕೊಂಡಿದೆ.