ಬೆಂಗಳೂರು: ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರ ಹತ್ಯೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಡುಗಡೆಯನ್ನು ಸಂಭ್ರಮಿಸಿದ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಪಕ್ಷ ತೀವ್ರವಾಗಿ ಲೇವಡಿ ಮಾಡಿದೆ.
ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರ ಸಂಭ್ರಮವನ್ನು ಖಂಡಿಸಿರುವ ಬಿಜೆಪಿ, ''ವಿವಾದಾತ್ಮಕತೆಯೇ ನಾಯಕತ್ವದ ಗುಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಬೆನ್ನು ತಟ್ಟಿಕೊಂಡ ಮೇಲೆ ವಿನಯ್ ಕುಲಕರ್ಣಿ ಅವರಂಥಹ ಕೊಲೆ ಆರೋಪಿಗೆ ಭವ್ಯ ಸ್ವಾಗತ ಸಿಗುವುದರಲ್ಲಿ ಹೆಚ್ಚುಗಾರಿಕೆ ಇಲ್ಲ. ತಿಹಾರ್, ಹಿಂಡಲಗಾ ಜೈಲಿನಿಂದ ಹೊರಬಂದವರೇ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಶ್ರೇಷ್ಠರು'' ಎಂದು ವ್ಯಂಗ್ಯವಾಡಿದೆ.
ಬಿಜೆಪಿಯ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ವಿನಯ್ ಕುಲಕರ್ಣಿ ಬಂಧನಕ್ಕೊಳಗಾಗಿದ್ದರು. ಸುದೀರ್ಘ ಅವಧಿಯ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಶನಿವಾರ ಬೆಳಗ್ಗೆ ಹಿಂಡಲಗಾ ಜೈಲಿನಿಂದ ಆಚೆ ಬಂದಿದ್ದಾರೆ. ಇವರ ಆಗಮನವನ್ನು ಸಂಭ್ರಮಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿ ತಿನ್ನಿಸಿ ಬರಮಾಡಿಕೊಂಡಿದ್ದಾರೆ. ಈ ರೀತಿ ಸ್ವಾಗತಿಸುವ ಕಾರ್ಯವನ್ನು ಬಿಜೆಪಿ ಟೀಕಿಸುವ ಮೂಲಕ ಖಂಡಿಸಿದೆ.
ಕಾಂಗ್ರೆಸ್ ಪಕ್ಷ ನೈತಿಕವಾಗಿ ಅಧಃಪತನ ಕಂಡಿದೆ ಎಂಬುದನ್ನು ಸೂಚಿಸಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕೊಲೆ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರಬಂದರೆ ಯುದ್ಧ ಗೆದ್ದು ಬಂದವರಂತೆ ಸ್ವಾಗತಿಸಲಾಗುತ್ತಿದೆ. ಕೊಲೆ ಆರೋಪಿಗಳಿಗೆ ಭವ್ಯ ಸ್ವಾಗತ ನೀಡುವುದನ್ನು ಕಾಂಗ್ರೆಸ್ ವರಿಷ್ಠರು ಬೆಂಬಲಿಸುತ್ತಾರೆಯೇ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ 11 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆ