ಕರ್ನಾಟಕ

karnataka

ಆಕಾಶ ಅಳೆಯುವ ಮುನ್ನ ಅಂಗಳ ಅಳೆಯಿರಿ... ಹೂಡಿಕೆ ವಿಚಾರಕ್ಕೆ ತೆಲಂಗಾಣ ಸಚಿವಗೆ ಬಿಜೆಪಿ ಟಾಂಗ್​

By

Published : Apr 5, 2022, 4:54 PM IST

ಬೆಂಗಳೂರಿನಲ್ಲಿ ಹೂಡಿಕೆ ಮಾಡುವುದನ್ನು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದು ಟ್ವೀಟ್​ ಮಾಡಿದ್ದ ತೆಲಂಗಾಣದ ಸಚಿವರೊಬ್ಬರ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ವಿದೇಶಿ ಬಂಡವಾಳ ಹೂಡಿಕೆಯ ಬಗ್ಗೆ ತಿಳಿದುಕೊಳ್ಳಿ ಎಂದು ಟಾಂಗ್ ನೀಡಿದೆ.

bjp-tong
ಬಿಜೆಪಿ ಟಾಂಗ್​

ಬೆಂಗಳೂರು:ಆಕಾಶ ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವುದನ್ನು ಕಲಿತುಕೊಳ್ಳಿ ಎಂದು ಹೈದರಾಬಾದ್​ಗೆ ಬರುವಂತೆ ಉದ್ಯಮಿಗಳಿಗೆ ಆಹ್ವಾನ ನೀಡಿ ಟ್ವೀಟ್ ಮಾಡಿರುವ ತೆಲಂಗಾಣ ಸಚಿವ ಕೆ.ಟಿ. ರಾಮರಾವ್​ಗೆ ಬಿಜೆಪಿ ಟ್ವೀಟ್ ಮೂಲಕವೇ ತಿರುಗೇಟು ನೀಡಿದೆ.

ತಮ್ಮ ಊಟದ ತಟ್ಟೆಯಲ್ಲಿ ಬಿದ್ದ ಹೆಗ್ಗಣ ನೋಡಿ ಸುಮ್ಮನಾಗುವವರು ನೆರೆಮನೆಯವನ ಊಟದ ತಟ್ಟೆಯ ನೊಣದ ಬಗ್ಗೆ ಮಾತನಾಡುವುದು ಸಹಜ. ತೆಲಂಗಾಣದಲ್ಲಿ ಏನಾಗುತ್ತಿದೆ ಎಂಬುದು ದೇಶಕ್ಕೇ ತಿಳಿದಿದೆ. ಓಲೈಕೆ ರಾಜಕಾರಣದಿಂದ ನೆಲೆ ಕಳೆದುಕೊಂಡ ಕೆಸಿಆರ್ ಸರ್ಕಾರ ಈಗ ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರಿಗೆ ಸವಾಲೆಸೆಯುವುದು ಹಾಸ್ಯಾಸ್ಪದ ಎಂದು ಬಿಜೆಪಿ ಟಾಂಗ್ ನೀಡಿದೆ.

ಗಂಟು- ಮೂಟೆ ಕಟ್ಟಿಕೊಂಡು ಹೈದರಾಬಾದಿಗೆ ಬನ್ನಿ ಎಂದು ಉದ್ಯಮಿಗಳಿಗೆ ಸವಾಲು ಹಾಕುವ ಕೆಟಿಆರ್ ಅವರೇ, ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ನೀವು ಎಷ್ಟನೇ ಸ್ಥಾನದಲ್ಲಿದ್ದೀರಿ? ಕರ್ನಾಟಕಕ್ಕೂ ನಿಮಗೂ ಇರುವ ಅಂತರ ಎಷ್ಟು ಎಂಬುದನ್ನು ಮೊದಲು ವಿಶ್ಲೇಷಿಸಿ. ಆಕಾಶ ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವುದನ್ನು ಕಲಿತುಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

ವಿದೇಶಿ ಬಂಡವಾಳ ಹೂಡಿಕೆ, ಐಟಿಬಿಟಿ, ನವೋದ್ಯಮ ಸೇರಿದಂತೆ ಎಲ್ಲ ಔದ್ಯಮಿಕ ಕ್ಷೇತ್ರಗಳಲ್ಲೂ ಬೆಂಗಳೂರು ಇಂದಿಗೂ ಹೂಡಿಕೆದಾರರ ಸ್ವರ್ಗ. ನವಭಾರತಕ್ಕಾಗಿ ನವ ಬೆಂಗಳೂರು ಎಂಬ ನಮ್ಮ ಸಂಕಲ್ಪದಲ್ಲಿ ಯಾವುದೇ ರಾಜಿ ಇಲ್ಲ. ನೆರೆರಾಜ್ಯಗಳೊಂದಿಗೆ ಈ ರೀತಿಯ ಆಕ್ರಮಣಕಾರಿ ಪೈಪೋಟಿ ನಿಮಗೆ ತಿರುಗುಬಾಣವಾಗಲಿದೆ ಎಂದು ಟೀಕಿಸಿದೆ.

ನೀತಿ ಆಯೋಗ ಬಿಡುಗಡೆ ಮಾಡಿದ ನಾವೀನ್ಯತೆ ಸಾಮರ್ಥ್ಯದ ಅಗ್ರ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ತೆಲಂಗಾಣಕ್ಕೆ ಲಭಿಸಿರುವುದು ನಾಲ್ಕನೇ ಸ್ಥಾನ. ಸ್ಥಾನ - ಮಾನಗಳನ್ನು ಅರಿತು ಮಾತಾಡಿದಾಗ ಮಾತ್ರ ಅದಕ್ಕೊಂದು ಬೆಲೆಯಲ್ಲವೇ? ಎಂದು ಪ್ರಶ್ನಿಸಿದೆ.

ಓದಿ:ಟ್ಯೂಷನ್ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ.. ಶಿಕ್ಷಕಿ ಮತ್ತು ಸ್ನೇಹಿತ ಅರೆಸ್ಟ್!

ABOUT THE AUTHOR

...view details