ಬೆಂಗಳೂರು:ರಾಜಕೀಯ ಪಕ್ಷವಾಗಿ ಅಧಿಕಾರ ಹಿಡಿಯಲು ನಮಗೆ ಆಪರೇಷನ್ ಕಮಲ ಅನಿವಾರ್ಯವಾಗಿತ್ತು. ಅಧಿಕಾರಕ್ಕಾಗಿ ನಾವು ಆಪರೇಷನ್ ಕಮಲ ಮಾಡಿರಬಹುದು. ಆದರೆ, ಅಧಿಕಾರಕ್ಕೆ ಬಂದ ಮೇಲೆ ನಾವು ಏನು ಮಾಡಿದ್ದೇವೆ ಎನ್ನುವುದೇ ಮುಖ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಆಪರೇಷನ್ ಕಮಲವನ್ನು ಸಮರ್ಥಿಸಿಕೊಂಡಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಆಪರೇಷನ್ ಕಮಲ ಮಾಡಿದಾಗ ಬೇರೆ ಪಕ್ಷಗಳಿಂದ ಕರ್ಕೊಂಡ್ ಬರೋದೇನಾ ನಿಮ್ ಕೆಲಸ ಅಂತ ಬಹಳ ಜನ ಕೇಳಿದ್ದರು. ಆದರೆ, ಆಪರೇಷನ್ ಕಮಲ ಅನಿವಾರ್ಯ. ರಾಜಕೀಯ ಪಕ್ಷ ಅಧಿಕಾರ ಹಿಡಿಯಲು ಇದು ಅನಿವಾರ್ಯ. ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿರಬಹುದು, ಆದರೆ ನಮ್ಮ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿದವರು. ಸಾಮಾನ್ಯ ಕಾರ್ಯಕರ್ತನನ್ನೂ ಶಾಸಕನನ್ನಾಗಿ ಮಾಡುತ್ತೇವೆ. ಕೆಳ ವರ್ಗದವರಿಗೆ ಅಧಿಕಾರ ನೀಡುತ್ತೇವೆ ಎಂದರು.
ಕಾಂಗ್ರೆಸ್ನಲ್ಲಿ ಪದಾಧಿಕಾರಿಗಳ ತಂಡ ಸಾಂವಿಧಾನಿಕವಾಗಿಲ್ಲ. ಕಾಂಗ್ರೆಸ್ನಲ್ಲಿ ಅವ್ಯವಸ್ಥೆ ತುಂಬಿದೆ. ಅವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ. ಇನ್ನು ನಾಡನ್ನು ಹೇಗೆ ಕಟ್ಟುತ್ತಾರೆ. ಕಾಂಗ್ರೆಸ್ನಲ್ಲಿ 150 ಮಂದಿ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ. ಅದು ಮುಂದೆ 250 ದಾಟುತ್ತದೆ ಎಂದು ಕಟೀಲ್ ವ್ಯಂಗ್ಯವಾಡಿದರು.